ಮುಂಬೈ, ಜ 12(DaijiworldNews/AA): ದೇಶದ ಅತಿ ಉದ್ದದ ಸಮುದ್ರ ಸೇತುವೆಯಾದ 'ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್' (MTHL) ಅನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಲಿದ್ದಾರೆ.
ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಸಮುದ್ರ ಸೇತುವೆಯು ಸುಮಾರು 21.8 ಕಿ.ಮೀ ಉದ್ದವಿದ್ದು, ಇದು ಮುಂಬೈನ ಸೆವ್ರಿ ಹಾಗೂ ರಾಯಗಡ ಜಿಲ್ಲೆಯ ನ್ಹವಾ ಶೇವಾ ಪ್ರದೇಶದ ನಡುವೆ ನಿರ್ಮಾಣಗೊಂಡಿದೆ. 1962 ರಲ್ಲಿ ಅಂದರೆ 60 ವರ್ಷಗಳ ಹಿಂದೆ ಈ ಎರಡು ನಗರಗಳನ್ನು ಸಂಪರ್ಕಿಸುವ ರಸ್ತೆಯನ್ನು ನಿರ್ಮಿಸಲು ಯೋಜನೆ ಸಿದ್ಧಗೊಂಡಿತ್ತು. ಪ್ರಸ್ತುತ ಈ ಸೇತುವೆ ಮೂಲಕ 2 ಗಂಟೆಗಳಿಂದ ಸುಮಾರು 15 ರಿಂದ 20 ನಿಮಿಷಗಳಿಗೆ ಪ್ರಯಾಣದ ಸಮಯ ಕಡಿಮೆಯಾಗಿದೆ.
ರಾಜ್ಯದ ಎರಡು ದೊಡ್ಡ ನಗರಗಳನ್ನು ಸಂಪರ್ಕಿಸುವ ಮುಂಬೈ ಪುಣೆ ಎಕ್ಸ್ಪ್ರೆಸ್ ರಸ್ತೆಗೆ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಮತ್ತಷ್ಟು ಸಂಪರ್ಕ ಕಲ್ಪಿಸಿಕೊಡುತ್ತದೆ. 6 ಲೇನ್ ಮಾರ್ಗಗಳನ್ನು ಹೊಂದಿರುವ MTHL, ಸಮುದ್ರದ ಮೇಲೆ 16.50 ಕಿ.ಮೀ ಹಾಗೂ ಭೂಮಿಯ ಮೇಲೆ 5.50 ಕಿ.ಮೀ ಉದ್ದವಿದೆ. ಇನ್ನು ಈ ಸೇತುವೆಗೆ ʼಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತುʼ ಎಂದು ನಾಮಕರಣ ಮಾಡಲಾಗಿದೆ.
ಈ ಸೇತುವೆಯಿಂದ ಮುಂಬೈ-ಪುಣೆ ಎಕ್ಸ್ಪ್ರೆಸ್ವೇ, ಮುಂಬೈ-ಗೋವಾ ಎಕ್ಸ್ಪ್ರೆಸ್ವೇ, ವಿರಾರ್-ರಾಯ್ಘಡರ್ ಕಾರಿಡರ್ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ. ಈ ರಸ್ತೆಯಲ್ಲಿ 4 ಚಕ್ರದ ವಾಹನಗಳಿಗೆ ಗಂಟೆಗೆ ಗರಿಷ್ಠ 100 ಕಿ.ಮೀ ವೇಗದ ಮಿತಿಯನ್ನು ನಿಗದಿಪಡಿಸಲಾಗಿದ್ದು, ಈ ರಸ್ತೆಯಲ್ಲಿ ಬೈಕ್, ಅಟೋರಿಕ್ಷಾ, ಟ್ರ್ಯಾಕ್ಟರ್ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.