ಬೆಂಗಳೂರು, ಜ 11 (DaijiworldNews/MS): ಹಿಂದೂ ದ್ವೇಷ ಕಾಂಗ್ರೆಸ್ ನ ಕಣ ಕಣದಲ್ಲೂ ಇದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೊಸ್ಟ್ ಮಾಡಿದ ಮಾಡಿದ ಅವರು, 1951ರಲ್ಲಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೋಮನಾಥ ದೇವಾಲಯದ ಉದ್ಘಾಟನೆ ಆದಾಗ ಅಂದಿನ ಪ್ರಧಾನಿ ನೆಹರೂ ಅವರು ಅದರಲ್ಲಿ ಭಾಗವಹಿಸಿರಲಿಲ್ಲ.ಅಷ್ಟೇ ಅಲ್ಲದೆ, ಸೋಮನಾಥ ದೇವಾಲಯದ ಜೀರ್ಣೋದ್ಧಾರವನ್ನೇ ವಿರೋಧಿಸಿದ್ದ ನೆಹರೂ ಅವರು ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರನ್ನು ಸಹ ಹೋಗದಂತೆ ತಡೆಯಲು ಪ್ರಯತ್ನಿಸಿದ್ದರು ಎಂದು ದೂರಿದ್ದಾರೆ.
ಆಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಬಿಜೆಪಿ, ಆರ್ ಎಸ್ಎಸ್ ಕಾರ್ಯಕ್ರಮವಾಗಿದೆ, ಆದ್ದರಿಂದ ನಾವು ಹೋಗುವುದಿಲ್ಲ ಅಂತ ಹೇಳುತ್ತಿರುವ ಕಾಂಗ್ರೆಸ್ ಪಕ್ಷ 1951ರಲ್ಲಿ ಸೋಮನಾಥ ದೇವಾಲಯಕ್ಕೆ ಏಕೆ ಹೋಗಲಿಲ್ಲ?
1951ರಲ್ಲಿ ಬಿಜೆಪಿ ಇನ್ನೂ ಸ್ಥಾಪನೆಯೇ ಆಗಿರಲಿಲ್ಲ. ಮೇಲಾಗಿ ಅಂದು ಕಾಂಗ್ರೆಸ್ ಸರ್ಕಾರವೇ ಇತ್ತು, ಸ್ವತಃ ನೆಹರೂ ಅವರೇ ಪ್ರಧಾನಿ ಆಗಿದ್ದರು. ಕಾಂಗ್ರೆಸ್ ಪಕ್ಷದ ಹಿಂದೂ ದ್ವೇಷ ಅದರ ಕಣ ಕಣದಲ್ಲೂ ಇದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ ಎಂದು ಪ್ರಶ್ನಿಸಿದ್ದಾರೆ.