ಬೆಂಗಳೂರು, ಜ 11 (DaijiworldNews/MS): "ಜನಸಾಮಾನ್ಯರ ಗೋಳು ಕಾಂಗ್ರೆಸ್ ಸರ್ಕಾರದ ಮುಂದೆ ‘ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ’.ಸರ್ಕಾರ ಗಾಢ ನಿದ್ದೆಯಲ್ಲಿದೆ" ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.
ಸಿದ್ದರಾಮಯ್ಯ ಸರ್ಕಾರವನ್ನು ಸ್ಲೀಪಿಂಗ್ ಸರ್ಕಾರ ಎಂದು ಕರೆದಿರುವ ಬಿಜೆಪಿ , ಎಕ್ಸ್ ನಲ್ಲಿ ಪೋಸ್ಟ್ ಮಾಡಿ,"ರಾಜ್ಯದ ಹದಗೆಟ್ಟ ಆರ್ಥಿಕ ಸ್ಥಿತಿ ದಿವಾಳಿಯತ್ತ ಸಾಗಿರುವುದನ್ನು ಸ್ವತಃ ಕಾಂಗ್ರೆಸ್ ಶಾಸಕರೇ ಸಾರಿ ಹೇಳುತ್ತಿದ್ದಾರೆ, ತಿಪಟೂರು ಶಾಸಕ ಷಡಕ್ಷರಿ ತಿಂಗಳಾದರೂ ಬಿಡಿಗಾಸು ಅನುದಾನವೂ ಬಿಡುಗಡೆಯಾಗದೆ, ಜನರ ಕೆಲಸ ಮಾಡಲಾಗದೇ ಬರಿಗೈ ಶಾಸಕರಾಗಿ ಖಾಲಿ ಕೂತಿದ್ದೇವೆ ಎಂದು ಆಡಳಿತ ಪಕ್ಷ ಶಾಸಕರಿಂದಲೇ ನಿದ್ದೆಯಲ್ಲಿರುವ ಸರ್ಕಾರದ ಬಂಡವಾಳ ಬಯಲಾಗುತ್ತಿದೆ.
'ಪರಿಹಾರ ಹೆಚ್ಚಿಸಿದ ಬಳಿಕ ರೈತರ ಆತ್ಮಹತ್ಯೆ ಹೆಚ್ಚಳವೆಂದು ನಿಮ್ಮ ಸಚಿವರು ಹೇಳಿಕೆ ನೀಡಿದ್ದಾರೆ. ಮೋದಿ ಸರ್ಕಾರ ನೀಡುತ್ತಿರುವ ಕಿಸಾನ್ ಸಮ್ಮಾನ್ ಯೋಜನೆಯ 6,000 ರೂ. ಗಳ ಜೊತೆ ಯಡಿಯೂರಪ್ಪ ಅವರು ನೀಡುತ್ತಿದ್ದ 4,000 ರೂ. ಕಡಿತಗೊಳಿಸಿರುವ ನಿಮ್ಮ ಸರ್ಕಾರಕ್ಕೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಉಳಿದಿದೆಯೇ?ನಿದ್ದೆಯಲ್ಲಿರುವ ಸರ್ಕಾರ ಎದ್ದು ರೈತರಿಗೆ ಬೆಳೆ ಪರಿಹಾರ ನೀಡಲಿ ಎಂದು ಒತ್ತಾಯಿಸಿದೆ.
ಮಳೆ ವಿಫಲ, ವ್ಯವಸಾಯಕ್ಕೆ ವಿದ್ಯುತ್ ನೀಡದ ಫಲ, ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ನಿರ್ಧಾರದಿಂದಾಗಿ ಬೆಳೆ ಉತ್ಪನ್ನ ಈ ಬಾರಿ ವಿಪರೀತ ತಗ್ಗಿದೆ. ಇದರ ಪರಿಣಾಮ ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ಮುಂದಿನ ದಿನಗಳಲ್ಲಿ ‘ಅನ್ನ ಭಾಗ್ಯ’ ಯೋಜನೆಗೂ ಕುತ್ತು ತರಲಿದೆ. ಜನಸಾಮಾನ್ಯರ ಗೋಳು ಕಾಂಗ್ರೆಸ್ ಸರ್ಕಾರದ ಮುಂದೆ ‘ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ’.
ಉಚಿತ ಬಸ್ ಯೋಜನೆಯಿಂದ ಗ್ರಾಮೀಣ ವಿದ್ಯಾರ್ಥಿಗಳ ಪಾಡು ಹೇಳತೀರದು, ಗಾಢ ನಿದ್ದೆಯಲ್ಲಿರುವ ಸರ್ಕಾರ ಎದ್ದು ತೊಂದರೆಗಳನ್ನು ಅನುಭವಿಸುತ್ತಿರುವ ಕಾಲೇಜು ವಿದ್ಯಾರ್ಥಿಗಳ ಸಮಸ್ಯೆ ಆಲಿಸುವುದೇ? ಎಂದು ಬಿಜೆಪಿ ಪ್ರಶ್ನಿಸಿದೆ.