ನವದೆಹಲಿ, ಏ 22 (Daijiworld News/MSP): ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ತಮ್ಮ ವೈಯಕ್ತಿಕ ರಾಜಕೀಯ ಟೀಕೆಗೆ ತಪ್ಪಾಗಿ ಬಳಸಿಕೊಂಡಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.
ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಸಂಸದ ಮೀನಾಕ್ಷಿ ಲೇಖಿ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ರಾಹುಲ್ ಗೆ ನೋಟಿಸ್ ಜಾರಿ ಮಾಡಿ ಏಪ್ರಿಲ್ 22 ರೊಳಗೆ ವಿವರಣೆ ನೀಡುವಂತೆ ಆದೇಶಿಸಿತ್ತು.
ಈ ಹಿನ್ನಲೆಯಲ್ಲಿ ಸೋಮವಾರ ಅಫಿಡವಿಟ್ ಸಲ್ಲಿಸಿದ ರಾಹುಲ್ ಅದರಲ್ಲಿ ಚುನಾವಣಾ ಪ್ರಚಾರದ ಕಾವಿನಲ್ಲಿ ತಪ್ಪಾದ ಹೇಳಿಕೆ ನೀಡಿದ್ದೇನೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಚೌಕಿದಾರನನ್ನು ಚೋರ್ ಎಂಬುದಾಗಿ ಹೇಳಿದೆ. ವಾಯುಪಡೆ ಹಣವನ್ನು ಮೋದಿವರು ಅನಿಲ್ ಅಂಬಾನಿಗೆ ನೀಡಿದ್ದಾರೆ ಎಂದು ನಾನು ಹಲವು ತಿಂಗಳಿಂದ ಹೇಳುತ್ತಾ ಬಂದಿದ್ದೇನೆ. ಈಗ ನಮ್ಮ ವಾದವನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ ಎಂದು ರಾಹುಲ್ ಹೇಳಿದ್ದರು.