ಮಧ್ಯ ಪ್ರದೇಶ, ಜ 12(DaijiworldNews/AA): ’ಅನ್ನಪೂರ್ಣಿ’ ಸಿನಿಮಾದ ನಿರ್ದೇಶಕ, ನಿರ್ಮಾಪಕ ಹಾಗೂ ನಟಿ ನಯನತಾರಾ ಅವರ ವಿರುದ್ಧ ಸಿನಿಮಾದಲ್ಲಿ ಶ್ರೀರಾಮನಿಗೆ ಮತ್ತು ಹಿಂದೂ ಧರ್ಮಕ್ಕೆ ಧಕ್ಕೆ ಉಂಟಾಗುವ ಸನ್ನಿವೇಶಗಳಿವೆ ಎಂಬ ಕಾರಣಕ್ಕಾಗಿ ಮಧ್ಯ ಪ್ರದೇಶದ ಜಬಲ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನ್ನಪೂರ್ಣಿ ಸಿನಿಮಾ ವಿರುದ್ಧ ಹಲವಾರು ಮಂದಿ ಆಕ್ರೋಶ ವ್ಯಕ್ತಪಡಿಸಿರುವುದಷ್ಟೇ ಅಲ್ಲದೇ ಹಲವಾರು ಟೀಕೆಗಳೂ ವ್ಯಕ್ತವಾಗಿದ್ದವು. ಚಿತ್ರದ ಕುರಿತಂತೆ ವಿವಾದ ಪ್ರಾರಂಭವಾದ ಹಿನ್ನೆಲೆ ಅನ್ನಪೂರ್ಣಿ ಸಿನಿಮಾವನ್ನು ನೆಟ್ ಫ್ಲಿಕ್ಸ್ ಕೂಡ ತೆಗೆದು ಹಾಕಿದೆ. ಜೊತೆಗೆ ಈ ಸಿನಿಮಾ ವಿರುದ್ಧ ದೂರ ದಾಖಲಾಗಿದ್ದು, ಈ ಸಿನಿಮಾದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡಲಾಗಿದೆ ಎಂದು ಪ್ರತಿಭಟನೆಗಳು ಕೂಡ ನಡೆದಿದ್ದವು.
ಅನ್ನಪೂರ್ಣಿ ಚಿತ್ರದಲ್ಲಿ ಶ್ರೀರಾಮನನ್ನು ಮಾಂಸಾಹಾರಿಯಾಗಿ ತೋರಿಸಲಾಗಿದ್ದು. ಈ ಮೂಲಕ ಪ್ರಭು ಶ್ರೀ ರಾಮನಿಗೆ, ಹಿಂದೂ ಧರ್ಮಕ್ಕೆ ಧಕ್ಕೆ ಉಂಟು ಮಾಡಲಾಗಿದೆ ಎಂಬ ಕಾರಣಕ್ಕಾಗಿ ಸಿನಿಮಾ ವಿರುದ್ಧ ವಿರೋಧ ವ್ಯಕ್ತವಾಗಿತ್ತು. ಇಂತಹ ವಿವಾದಿತ ದೃಶ್ಯಗಳನ್ನು ಸಿನಿಮಾದಿಂದ ತೆಗೆದು ಹಾಕುವವರೆಗೂ ಅನ್ನಪೂರ್ಣಿ ಒಟಿಟಿಯಲ್ಲಿ ಲಭ್ಯವಿರುವುದಿಲ್ಲ.
ಅನ್ನಪೂರ್ಣಿ ನಟಿ ನಯನತಾರಾ ಅವರ 75ನೇ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ನಯನತಾರಾ ಹೊಸ ವಿಧದ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರ ಪಾತ್ರಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸಿನಿಮಾದಲ್ಲಿ ಪಕ್ಕಾ ಸಂಪ್ರದಾಯಸ್ಥ ಕುಟುಂಬದ ಹುಡುಗಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ.