ಶ್ರೀನಗರ, ಜ 12(DaijiworldNews/AA): UPSC ಪರೀಕ್ಷೆಯು ಪ್ರಪಂಚದ ಎರಡನೇ ಅತೀ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯನ್ನು ಭೇದಿಸಿ IAS, IFS ಮತ್ತು IPS ಅಧಿಕಾರಿಯಾಗುವ ಕನಸನ್ನು ಹಲವಾರು ಅಭ್ಯರ್ಥಿಗಳು ಕಂಡಿರುತ್ತಾರೆ. ಆದರೆ ಕೆಲವೇ ಕೆಲವು ಅಭ್ಯರ್ಥಿಗಳು ಮಾತ್ರ ತಾವು ಕಂಡ ಕನಸನ್ನು ನನಸಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಹೀಗೆ ತಾನು ಕಂಡ ಕನಸನ್ನು ನನಸಾಗಿಸಿಕೊಳ್ಳಲು ಪ್ರತಿಷ್ಠಿತ ಕಂಪನಿಯೊಂದರಲ್ಲಿ ದೊರೆತಿದ್ದ ಉತ್ತಮ ಉದ್ಯೋಗಾವಕಾಶವನ್ನು ತೊರೆದು IAS ಅಧಿಕಾರಿಯಾದ ಅಂಬಿಕಾ ರೈನ ಅವರ ಕಥೆ ಇದು.
ಅಂಬಿಕಾ ರೈನ ಅವರು ಮೂಲತಃ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದವರು. ಅಂಬಿಕಾ ಅವರ ತಂದೆ ಭಾರತೀಯ ಸೇನೆಯಲ್ಲಿ ಮೇಜರ್ ಜನರಲ್ ಹಾಗೂ ತಾಯಿ ಗೃಹಿಣಿ.
ಅಂಬಿಕಾ ಅವರ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರಣ ಅವರಿಗೆ ಆಗಾಗ್ಗೆ ವರ್ಗಾವಣೆಯಾಗುತ್ತಿದ್ದು. ಆದ್ದರಿಂದ ಅಂಬಿಕಾ ಅವರು ವಿವಿಧ ರಾಜ್ಯಗಳಲ್ಲಿ ತಮ್ಮ ಶಿಕ್ಷಣವನ್ನು ಪಡೆಯುತ್ತಾರೆ. ಅಂಬಿಕಾ ಅವರು ಗುಜರಾತ್ ನ ಅಹಮದಾಬಾದ್ ನಲ್ಲಿರುವ ಸಿಇಪಿಟಿ ವಿಶ್ವವಿದ್ಯಾಲಯದಲ್ಲಿ ವಾಸ್ತುಶಿಲ್ಪ ಅಧ್ಯಯನ ಮಾಡಿದರು. ಅಂಬಿಕಾ ಅವರು ತಮ್ಮ ಅಂತಿಮ ವರ್ಷದ ಪದವಿ ಅಧ್ಯಯನ ಮಾಡುತ್ತಿರುವಾಗಲೇ ಸಿಟ್ಜರ್ ಲ್ಯಾಂಡ್ ನ ಜ್ಯೂರಿಚ್ ನಲ್ಲಿರುವ ಪ್ರತಿಷ್ಠಿತ ಕಂಪನಿ ಹಾಗೂ ವಿವಿಧ ಕಂಪನಿಗಳಿಂದ ಆಫರ್ ಗಳನ್ನು ಪಡೆಯುತ್ತಾರೆ.
ಅಂಬಿಕಾ ಅವರ ಕೈಯಲ್ಲಿ ಉತ್ತಮ ಸಂಬಳ ಬರುತ್ತಿದ್ದ ಕೆಲಸವಿದ್ದರೂ ಅದನ್ನೆಲ್ಲಾ ಬಿಟ್ಟು, UPSC ಪರೀಕ್ಷೆ ಬರೆಯಲು ಹಾಗೂ ಪರೀಕ್ಷೆಗೆ ತಯಾರಿ ನಡೆಸಲು ನಿರ್ಧರಿಸುತ್ತಾರೆ. ಆದರೆ ಅಂಬಿಕಾ ಅವರು ಮಾನವಶಾಸ್ತ್ರ ವಿಷಯವನ್ನು ವ್ಯಾಸಂಗ ಮಾಡದ ಹಿನ್ನೆಲೆ ಅವರಿಗೆ ಪರೀಕ್ಷೆಗೆ ತಯಾರಿ ನಡೆಸಲು ಸ್ವಲ್ಪ ಕಷ್ಟವಾಗುತ್ತದೆ ಹಾಗೂ ಇದು ಅವರ ಆತ್ಮವಿಶ್ವಾಸದ ಮೇಲೆ ಪರಿಣಾಮವನ್ನು ಉಂಟುಮಾಡುತ್ತದೆ.
ಅಂಬಿಕಾ ಅವರು ಧೃತಿಗೆಡದೆ ಆತ್ಮವಿಶ್ವಾಸದಿಂದ ಹಾಗೂ ಸತತ ಪರಿಶ್ರಮದಿಂದ 2022 ರಲ್ಲಿ ಮೂರನೇ ಬಾರಿಗೆ UPSC ಪರೀಕ್ಷೆಯಲ್ಲಿ ತೇರ್ಗಡೆ ಹೊಂದುತ್ತಾರೆ. ತೇರ್ಗಡೆ ಹೊಂದುವುದರ ಜೊತೆಗೆ 164ನೇ ಅಖಿಲ ಭಾರತ ರ್ಯಾಂಕ್ ಕೂಡ ಗಳಿಸುತ್ತಾರೆ. ಪ್ರಸ್ತುತ ಅಂಬಿಕಾ ಅವರು IA ಮತ್ತು AS (ಭಾರತೀಯ ಆಡಿಟ್ ಮತ್ತು ಅಕೌಂಟ್ಸ್ ಸೇವೆ) ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.