ಹೊಸದಿಲ್ಲಿ, ಎ22(Daijiworld News/SS): ಒಂದು ವೇಳೆ ನನ್ನ ಮೇಲೆ ದಾಳಿ ನಡೆದರೂ ಮೋದಿ ತಡೆದುಕೊಳ್ಳಬಲ್ಲ, ಆದರೆ ದೇಶದ ಮೇಲೆ ದಾಳಿ ನಡೆದರೆ ಸಹಿಸುವುದಿಲ್ಲ ಎಂಬುದು ಜನರಿಗೆ ಅರಿವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಮೇಲೆ ದಾಳಿ ನಡೆದಾಗ ನಾನು ಸೇನೆಗೆ ಮುಕ್ತ ಸ್ವಾತಂತ್ರ್ಯ ನೀಡಿದೆ. ನಮ್ಮ ಸೇನೆ ವಾಯು ದಾಳಿ ನಡೆಸಿತು. ಪಾಕಿಸ್ಥಾನ ಬಿಗಿ ಭದ್ರತೆ ಕೈಗೊಂಡಿತ್ತು. ಆದರೆ ನಾವು ಹನುಮಂತನನ್ನು ಆರಾಧಿಸುವುದರಿಂದ ಯಶಸ್ಸು ಕಂಡಿದ್ದೇವೆ ಎಂದು ಹೇಳಿದರು.
ಪುಲ್ವಾಮಾದಲ್ಲಿ ದಾಳಿ ನಡೆದಾಗ ಮೋದಿ ಏನು ಮಾಡಬೇಕು ಎಂದು ದೇಶ ನಿರೀಕ್ಷಿಸುತ್ತಿತ್ತು...? ಮುಂಬಯಿ ದಾಳಿ ನಡೆದಾಗ ಮನಮೋಹನ ಸಿಂಗ್ ಮಾಡಿದಂತೆ ನಾನೂ ಮಾಡಿದ್ದರೆ ದೇಶ ನನ್ನನ್ನು ಕ್ಷಮಿಸುತ್ತಿತ್ತೇ...? ಎಂದು ಪ್ರಶ್ನಿಸಿದರು.
ವಾಯು ದಾಳಿ ಮಾಡಿದಾಗ ಸಾಕ್ಷ್ಯ ಕೇಳುತ್ತಿದ್ದ ಕಾಂಗ್ರೆಸ್ಗೆ ಈಗ ಸಾಕ್ಷ್ಯ ಸಿಕ್ಕಿತೇ...? ಕಾಂಗ್ರೆಸ್ ಸಾಕ್ಷ್ಯ ಕೇಳಿದ್ದಕ್ಕೆ ಜನ ಸಿಟ್ಟಾಗಿದ್ದಾರೆ. ಹೀಗಾಗಿ ಒಂದು ಹಾಗೂ ಎರಡನೇ ಹಂತದ ಮತದಾನದ ಅನಂತರ ಸಾಕ್ಷ್ಯ ಕೇಳುವುದನ್ನೇ ಅವರು ಬಿಟ್ಟಿದ್ದಾರೆ ಎಂದು ಮೋದಿ ವ್ಯಂಗ್ಯವಾಡಿದರು.
ಭಾರತ ದೇಶ ಸ್ವಾತಂತ್ರ್ಯ ಪಡೆದ ಸಮಯದಲ್ಲೇ ಸ್ವಾತಂತ್ರ್ಯ ಪಡೆದಿದ್ದ ಸಣ್ಣ ದೇಶಗಳು ನಮಗಿಂತ ಅಭಿವೃದ್ಧಿಯಲ್ಲಿ ಮುಂದೆ ಸಾಗಿವೆ. ಆದರೆ ನಾವು ಹಿಂದುಳಿದಿದ್ದೇವೆ ಎಂದು ದೂರಿದರು.