ಹೊಸದಿಲ್ಲಿ, ಎ22(Daijiworld News/SS): ಪುಲ್ವಾಮ ದಾಳಿಯಲ್ಲಿ (ಫೆಬ್ರುವರಿ 14) ಶಾಮೀಲಾಗಿದ್ದ ಜೈಶ್ ಎ ಮೊಹಮ್ಮದ್(ಜೆಇಎಂ) ಸಂಘಟನೆಯ ಎಲ್ಲಾ ಪ್ರಮುಖ ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಯ ಪ್ರಮುಖ ಕಮಾಂಡರ್ಗಳನ್ನು ಹತ್ಯೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ ಭದ್ರತಾ ಪಡೆಗಳು ನಡೆಸಿದ್ದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಬೆಂಬಲಿತ ಸುಮಾರು 66 ಉಗ್ರರನ್ನು ಹತ್ಯೆಗೈದಿರುವುದಾಗಿ ಮೂಲಗಳು ಹೇಳಿರುವುದಾಗಿ ಎ ಎನ್ ಐ ವರದಿ ವಿವರಿಸಿದೆ. ಈ ವರ್ಷದಲ್ಲಿ ಒಟ್ಟು 66 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದ್ದು, ಇದರಲ್ಲಿ ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್(ಜೆಇಎಂ) ಸಂಘಟನೆಯ 27 ಉಗ್ರರು ಸೇರಿರುವುದಾಗಿ ವರದಿ ತಿಳಿಸಿದೆ.
ಪುಲ್ವಾಮಾ ದಾಳಿ ನಡೆದು 45 ದಿನಗಳ ಒಳಗೆ ದಾಳಿಯಲ್ಲಿ ಭಾಗವಹಿಸಿದ್ದ ಜೈಶ್ ಎ ಮೊಹಮ್ಮದ್ನ ಇಡೀ ತಂಡವನ್ನು ತಾಂತ್ರಿಕ ಮತ್ತು ಮಾನವ ಬೇಹುಗಾರಿಕಾ ಆಧಾರಿತ ಕಾರ್ಯಾಚರಣೆಯ ಸಂಯೋಜನೆಯ ಮೂಲಕ ನಿಯಂತ್ರಿಸಲಾಗಿದೆ. ಇದರಲ್ಲಿ ದಾಳಿಯಲ್ಲಿ ಪಾಲ್ಗೊಂಡಿದ್ದ ಉಗ್ರರ ಬಂಧನ ಮತ್ತು ಗಡಿಪಾರು ಕೂಡ ಸೇರಿದೆ ಎಂದು ಮೂಲಗಳು ವಿವರಿಸಿವೆ.
ಪುಲ್ವಾಮಾ ದಾಳಿ ನಡೆದ ಬಳಿಕ ತರಬೇತಿ ಪಡೆಯುತ್ತಿದ್ದ 19 ಮಂದಿ ಜೈಶ್ ಎ ಮೊಹಮ್ಮದ್ ಉಗ್ರರನ್ನು ಎನ್ ಕೌಂಟರ್ ಮಾಡಿ ಹತ್ಯೆಗೈಯಲಾಗಿತ್ತು. ಮೂಲಗಳ ಪ್ರಕಾರ, ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಸಂಘಟನೆಯ ಎಲ್ಲಾ ಉಗ್ರರನ್ನು ಸಂಪೂರ್ಣವಾಗಿ ಹತ್ಯೆಗೈಯಲಾಗಿದೆ ಎಂದು ಹೇಳಿದೆ.