ಕಾಸರಗೋಡು, ಏ 22 (Daijiworld News/SM): ಲೋಕಸಭಾ ಚುನಾವಣೆಗೆ ಕಾಸರಗೋಡು ಸಜ್ಜಾಗಿದೆ. ಏಪ್ರಿಲ್ 23ರಂದು ಕೇರಳಾದಲ್ಲಿ ಮತದಾನ ನಡೆಯಲಿದೆ.
ಕಾಸರಗೋಡಿನಲ್ಲಿ ನಾಳೆ ಸುಮಾರು 13, 63,937 ಮಂದಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮತದಾನಕ್ಕಾಗಿ ಮತಗಟ್ಟೆಗಳು ಸಜ್ಜಾಗಿವೆ. ಸೋಮವಾರ ಬೆಳಗ್ಗೆಯೇ ಮತಗಟ್ಟೆಗಳನ್ನು ಸಜ್ಜುಗೊಳಿಸುವ ಕಾರ್ಯ ನಡೆದಿದೆ. ಜಿಲ್ಲೆಯ 1371 ಮತಗಟ್ಟೆಗಳಿಗಿರುವ ಸಾಮಾಗ್ರಿಗಳನ್ನು ಮಧ್ಯಾಹ್ನದ ವೇಳೆಗೆ ಆಯಾ ಮತಗಟ್ಟೆಗೆ ತಲುಪಿಸಲಾಗಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ. ಯುಡಿಎಫ್, ಎಲ್ ಡಿಎಫ್ ಹಾಗೂ ಬಿಜೆಪಿ ನಡುವೆ ನೇರ ಹಾಣಾಹಣಿ ಏರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿ ರವೀಶ್ ತಂತ್ರಿ ಕುಂಟಾರು, ಯುಡಿಎಫ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತಾನ್, ಎಲ್ ಡಿಎಫ್ ಸತೀಶ್ ಚಂದ್ರನ್ ಕಣದಲ್ಲಿದ್ದು, ತೀವ್ರ ಕುತೂಹಲ ಕೆರಳಿಸಿದೆ.
ಕಾಸರಗೋಡು ಸರಕಾರಿ ಕಾಲೇಜು, ಪಡನ್ನಕ್ಕಾಡ್ ನೆಹರೂ ಕಾಲೇಜುಗಳಲ್ಲಿ ಮತಗಟ್ಟೆಗಳ ಸಾಮಾಗ್ರಿ ವಿತರಣೆ ನಡೆದಿದ್ದು, ಮತಗಟ್ಟೆಗೆ ನೇಮಕಗೊಂಡಿರುವ ಸಿಬ್ಬಂದಿಗಳು ಮತಗಟ್ಟೆಗೆ ತಲಪಿಸಿದರು. ನಾಳೆ ಬೆಳಿಗ್ಗೆ 7 ರಿಂದ ಸಂಜೆ 6ರ ತನಕ ಮತದಾನ ನಡೆಯಲಿದ್ದು, 43 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲಿ ವಿವಿ ಪ್ಯಾಟ್, ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ . ಅಹಿತಕರ ಘಟನೆ ನಡೆಯದಂತೆ ವಿಶೇಷ ಭದ್ರತೆಯನ್ನು ಕಲ್ಪಿಸಲಾಗಿದೆ.