ನವದೆಹಲಿ, ಜ 16(DaijiworldNews/SK): ಭಾರತ ಮತ್ತು ಅರ್ಜೆಂಟೀನಾ ನಡುವೆ 5 ಲಿಥಿಯಂ ಬ್ಲಾಕ್ಗಳ ಪರಿಶೋಧನೆ ಹಾಗೂ ಗಣಿಗಾರಿಕೆಗೆ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ ಎಂದು ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಸಚಿವ ಪ್ರಹ್ಲಾದ್ ಜೋಶಿ ಅವರು, ಅರ್ಜೆಂಟೀನಾದಲ್ಲಿ 5 ಲಿಥಿಯಂ ಬ್ಲಾಕ್ಗಳಲ್ಲಿ ಗಣಿಗಾರಿಕೆ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಹಿ ಹಾಕುವ ಮೂಲಕ ಭಾರತ ಹೊಸ ಮೈಲಿಗಲ್ಲುನ್ನು ಸಾಧಿಸಿದೆ. ಈ ಒಪ್ಪಂದವು ಖನೀಜ್ ಬಿಡೇಶ್ ಇಂಡಿಯಾ ಲಿಮಿಟೆಡ್ ಮತ್ತು CAMYEN, ಅರ್ಜೆಂಟೀನಾದ ಕ್ಯಾಟಮಾರ್ಕಾ ಪ್ರಾಂತ್ಯದ ಸರ್ಕಾರಿ ಸ್ವಾಮ್ಯದ ಕಂಪನಿ ನಡುವೆ ಏರ್ಪಟ್ಟಿದೆ ಎಂದರು.
ಇನ್ನು ಅರ್ಜೆಂಟೀನದಲ್ಲಿ ವಿಶ್ವದ ಅರ್ಧಕ್ಕಿಂತ ಹೆಚ್ಚು ಲಿಥಿಯಂ ಘಟಗಳಿದ್ದು, ಮೊಬೈಲ್ ಫೋನ್ ಗಳು, ಲ್ಯಾಪ್ ಟಾಪ್ ಗಳು, ಡಿಜಿಟಲ್ ಕ್ಯಾಮರಾಗಳು ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ರೀಚಾರ್ಚ್ ಮಾಡಬಹುದಾದ ಬ್ಯಾಟರಿಗಲ್ಲಿ ಲಿಥಿಯಂನ ಪ್ರಮುಖ ಪಾತ್ರವಿದೆ. ಇದರೊಂದಿಗೆ ಜಾಗತಿಕ ನಿವ್ವಳ ಶೂನ್ಯ ಗುರಿಗಳನ್ನು ಸಾಧಿಸಲು ನಿರ್ಣಾಯಕ ವಸ್ತುಗಳ ಪೂರೈಕೆ, ವೈವಿಧ್ಯೀಕರಣವನ್ನು ಉತ್ತಮಗೊಳಿಸುವುದರ ಜೊತೆಗೆ ಭಾರತಕ್ಕೆ ಲಿಥಿಯಂ ಪೂರೈಕೆಯನ್ನು ಬಲಪಡಿಸುತ್ತದೆ ಎಂದು ಜೋಶಿ ತಿಳಿಸಿದ್ದಾರೆ.