ಬಿಹಾರ, ಜ 17 (DaijiworldNews/PC): ಸಾಮಾನ್ಯವಾಗಿ ನಮೆಲ್ಲರ ಮನಸ್ಸಿನಲ್ಲಿ ಒಂದು ಭಾವನೆ ಇರುತ್ತದೆ ಕಾಲೇಜಿನ ಸಮಯದಲ್ಲಿ ಯಾರು ಅತೀ ಹೆಚ್ಚಿನ ಅಂಕ ಪಡೆಯುತ್ತಾರೆ. ಅವರು ಮಾತ್ರವೇ ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸಾಧ್ಯ ಎಂದು. ಆದರೆ ಇದಕ್ಕೆ ವಿರುದ್ದ ಎಂಬಂತೆ ತಮ್ಮ ಪದವಿಯಲ್ಲಿ ಅನೇಕ ವಿಷಯಗಳಲ್ಲಿ ಫೇಲ್ ಆಗಿದ್ದರೂ IAS ಪಾಸ್ ಆದ ವ್ಯಕ್ತಿಯೊಬ್ಬರ ಯಶೋಗಾಥೆಯನ್ನು ತಿಳಿಯೋಣ.
ಬಿಹಾರದ ಕತಿಹಾರ್ ಜಿಲ್ಲೆಯವರಾದ ಅನುರಾಗ್ ರವರು ಹಿಂದಿ ಮಾಧ್ಯಮದಲ್ಲೇ 8ನೇ ತರಗತಿಯವರೆಗೆ ಓದಿದ್ದಾರೆ. ಬಳಿಕ ಅವರು ಇಂಗ್ಲಿಷ್ ಮಾಧ್ಯಮಕ್ಕೆ ಬದಲಾಯಿಸಿದರು. ಮಾಧ್ಯಮ ಬದಲಾವಣೆಯಿಂದ ಸ್ಪಲ್ಪ ಕಷ್ಟ ಆದರೂ ತಮ್ಮ ಕಠಿಣ ಪರಿಶ್ರಮದಿಂದ 10 ಮತ್ತು 12ರಲ್ಲಿ ಉತ್ತಮ ಅಂಕ ಗಳಿಸಿದರು.
ಬಳಿಕ ಇವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದೆಹಲಿಗೆ ಬಂದರು. 12 ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ, IAS ಅನುರಾಗ್ ರವರು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಲು ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ಗೆ ಸೇರಿದರು.
2014 ರಲ್ಲಿ ಎಸ್ ಆರ್ ಸಿಸಿಯಿಂದ ಪದವಿ ಪಡೆದರು ಮತ್ತು 2016 ರಲ್ಲಿ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಸ್ನಾತಕೋತ್ತರ ಪದವಿ ಪಡೆದರು. ಈ ಸಮಯದಲ್ಲಿ ಅವರು ಅನೇಕ ವಿಷಯಗಳಲ್ಲಿ ಅನುತ್ತೀರ್ಣರಾಗಿ ನಂತರ 2ನೇ ಪ್ರಯತ್ನದಲ್ಲಿ ಪಾಸ್ ಆಗಿದ್ದರು.
ಬಳಿಕ ಅವರು UPSC ಪರೀಕ್ಷೆಯನ್ನು ಬರೆದು ಮೊದಲ ಪ್ರಯತ್ನದಲ್ಲಿ ವಿಫಲರಾಗಿದ್ದರೂ ಪ್ರಯತ್ನವನ್ನು ಬಿಡದೆ ಎರಡನೇ ಪ್ರಯತ್ನದಲ್ಲಿ, CSE 2018 ರಲ್ಲಿ, ಅವರು ಉತ್ತಮ ಅಂಕಗಳನ್ನು ಪಡೆದರು. ಪ್ರಸ್ತುತ ನಳಂದದಲ್ಲಿ IAS ಆಗಿ ಸ್ಥಾನ ಪಡೆದಿದ್ದಾರೆ.
ಪರೀಕ್ಷೆಯಲ್ಲಿ ಆತುರ ತೋರಬಾರದು. ಪ್ರತಿಯೊಂದು ವಿಷಯವನ್ನು ಬಹಳ ಆಳವಾಗಿ ಅಧ್ಯಯನ ಮಾಡಬೇಕು. ಕಠಿಣ ಪರಿಶ್ರಮ ಮತ್ತು ಉತ್ತಮ ತಂತ್ರದೊಂದಿಗೆ ಅಧ್ಯಯನ ಮಾಡುವುದು ಯಶಸ್ಸಿನ ಕೀಲಿಯಾಗಿದೆ, ಎಂದು ಅನುರಾಗ್ ಹೇಳುತ್ತಾರೆ.
ಸೋತೆ ಎಂದು ಕೊರಗುದಕ್ಕಿಂತ ಅದನ್ನೇ ಯಶಸ್ಸಿನ ಮೆಟ್ಟಿಲಾಗಿಸಿ ಕೊಳ್ಳಬಹುದು ಎಂಬುದಕ್ಕೆ ಇವರು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ.