ಬೆಂಗಳೂರು, ಜ.18 (DaijiworldNews/AK): ನಿಗಮ, ಮಂಡಳಿಗಳ ನೇಮಕ ಪಟ್ಟಿಯಲ್ಲಿ 36 ಶಾಸಕರು, 39 ಕಾರ್ಯಕರ್ತರಿಗೆ ಸ್ಥಾನ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಿಗಮ ಮಂಡಳಿಗಳ ನೇಮಕ ಪಟ್ಟಿ ಯಾವುದೇ ಕ್ಷಣದಲ್ಲಿ ಬಿಡುಗಡೆ ಆಗಲಿದೆ. ನಾಯಕರು ಹಾಗೂ ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತಂದವರು. ಅವರ ಹಕ್ಕಿನಂತೆ ಈ ಅಧಿಕಾರ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆ ಸಂಬಂಧ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯನ್ನು ನಾಳೆ ಸಂಜೆ 4.30 ಕ್ಕೆ ಕ್ವೀನ್ಸ್ ರಸ್ತೆಯ ಇಂದಿರಾ ಗಾಂಧಿ ಭವನದಲ್ಲಿ ನಡೆಸಲಾಗುವುದು. ಪ್ರಧಾನ ಮಂತ್ರಿಗಳು ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಭೆಯನ್ನು ಸಂಜೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಅಭ್ಯರ್ಥಿಗಳ ಆಯ್ಕೆ ಸಂಬಂಧ ನಾಳೆ ಮೊದಲ ಸುತ್ತಿನ ಚರ್ಚೆ ನಡೆಯಲಿದೆ. ಈ ಸಭೆಗೆ ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರನ್ನು ಆಹ್ವಾನಿಸಲಾಗಿದೆ, ಹಾಗೂ ಚುನಾವಣಾ ಸಮಿತಿಯಲ್ಲಿದ್ದವರು ಇರಲಿದ್ದಾರೆ ಎಂದರು.