ಬೆಂಗಳೂರು, ಜ.18 (DaijiworldNews/AK): ನಿಮಗೆ ಅರ್ಹತೆಯಿದ್ದರೆ ಸಿದ್ದರಾಮಯ್ಯರಿಂದ ಒಂದು ಶ್ಲೋಕ ಹೇಳಿಸಿ. ನಿಮ್ಮ ತಂದೆಯಿಂದ ಒಂದು ಶ್ಲೋಕ ಹೇಳಿಸಿ. ಆಮೇಲೆ ಜಗತ್ತಿಗೆ ಬುದ್ಧಿ ಹೇಳಲು ಬನ್ನಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಪ್ರಿಯಾಂಕ್ ಖರ್ಗೆಯವರಿಗೆ ಸವಾಲು ಹಾಕಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ, ವಿಚಾರಧಾರೆ ಮತ್ತು ಪರಂಪರೆಯ ಮೇಲೆ ಬೆಳೆದಿದೆ. ತಂದೆ ಹಾಕಿದ ಆಲದ ಮರದ ನೆರಳಲ್ಲಿ ಬೆಳೆದವರು ಬಿಜೆಪಿ ಕಾರ್ಯಕರ್ತರಲ್ಲ. ಪ್ರಿಯಾಂಕ್ ಖರ್ಗೆಗೆ ಯಾವ ಪರಿಶ್ರಮದ ಅನುಭವವೂ ಇಲ್ಲ. ಬರಿಯ ಭಗವದ್ಗೀತೆ ಅಲ್ಲ. ವೇದ, ಉಪನಿಷತ್ ಎಲ್ಲವನ್ನೂ ಕೂಡ ಮಾತನಾಡುವಂಥವರು ಬಿಜೆಪಿಯಲ್ಲಿ ಇದ್ದಾರೆ. ನಾನು ನೂರು ಶ್ಲೋಕಗಳನ್ನು ಹೇಳಬಲ್ಲೆ. ಪ್ರಿಯಾಂಕ್ ಖರ್ಗೆಯವರಿಗೆ ನಾನು ಸವಾಲೆಸೆಯುತ್ತೇನೆ ಎಂದು ನುಡಿದರು.
ಅವರ ಬಾಲಿಶ ವರ್ತನೆಗೆ ಪ್ರತಿಕ್ರಿಯೆ ಕೊಡುವಂಥದ್ದು ಏನೂ ಇಲ್ಲ ಎಂದು ಹೇಳಿದರು.ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಯಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬೀಳುತ್ತಿದೆ. ಬೆಂಗಳೂರಿನ ವಿಜಯನಗರದಲ್ಲಿ ಅಯೋಧ್ಯೆ ರಾಮಮಂದಿರದ ಫೋಟೊ ಹಾಕಿದಾಗ, ಮೋದಿಯವರ ಭಾವಚಿತ್ರ ಇರುವ ಬ್ಯಾನರ್ ಹಾಕಿದಾಗ ಕೇಸು ಹಾಕುತ್ತಾರೆ. ಆದರೆ, ಪ್ರಿಯಕೃಷ್ಣ, ಕೃಷ್ಣಪ್ಪ ಅವರ ಫೋಟೊ ಇರುವ ಬ್ಯಾನರ್ಗಳು ರಾರಾಜಿಸುತ್ತಿವೆ ಎಂದು ಆಕ್ಷೇಪಿಸಿದರು.