ಬೆಂಗಳೂರು, ಜ.18 (DaijiworldNews/AK): ಶ್ರೀರಾಮನ ಕುರಿತು ತಪ್ಪಾಗಿ ಮಾತನಾಡಿದ ಸಚಿವ ರಾಜಣ್ಣನ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ಷಮೆ ಕೇಳಬೇಕು ಅಥವಾ ರಾಜಣ್ಣನ ಮೂಲಕ ಕ್ಷಮೆ ಕೇಳಿಸಬೇಕು ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಡಿ.ವಿ. ಸದಾನಂದಗೌಡ ಆಗ್ರಹಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಲಾರದ ಮುಳಬಾಗಿಲಿನ ಬ್ಯಾನರ್ ಹರಿದರಲ್ಲವೇ? ಎಷ್ಟು ಜನರನ್ನು ಬಂಧಿಸಿದ್ದೀರಿ ಎಂದು ಪ್ರಶ್ನಿಸಿದರು.
ಮುಂದೆ ಸಿದ್ದರಾಮಯ್ಯನವರ ಫೋಟೊ ಇರುವ ಬ್ಯಾನರ್ಗಳು ಹರಿದು ಹೋಗುವ ದಿನ ಬರಲಿದೆ ಎಂದು ಎಚ್ಚರಿಸಿದರು.ರಾಜಣ್ಣ ಅವರಿಗೆ ಕಾಲ ಮಿಂಚಿಲ್ಲ. ಆ ಗೊಂಬೆ ಮುಂದಿನ ದಿನಗಳಲ್ಲಿ ಉರುಳಾಗಿ ಕಾಡಲಿದೆ. ರಾಜಣ್ಣನಿಗೆ ಬೊಂಬೆ ಕಂಡಿತೇ? ಅರಸಿನ ಕಾಮಾಲೆ ರೋಗದವರಿಗೆ ಅರಸಿನವಾಗಿಯೇ ಕಾಣುತ್ತದೆ. ಸಹಕಾರ ಸಚಿವನಾಗಿ ಮಾಡಿದ್ದಾರೆ. ಛೇ, ಸಿದ್ದರಾಮಯ್ಯರಿಂದ ಕೆಟ್ಟ ಕೆಲಸವಿದು. ಸಿದ್ದರಾಮಯ್ಯರ ಓಲೈಕೆ ಮುಂದುವರೆದಿದೆ. ಈ ವ್ಯವಸ್ಥೆಯಿಂದ ಕಾಂಗ್ರೆಸ್ 3 ಹೋಳಾಗಲಿದೆ. ಬಹಳ ದಿನ ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಟೀಕಿಸಿದರು.
14 ಬಜೆಟ್ ಕೊಟ್ಟ ಸಿದ್ದರಾಮಯ್ಯನವರು ತಮ್ಮ ಸಚಿವರನ್ನು ಹೇಗೆ ತರಬೇತಿ ಮಾಡಿದ್ದಾರೆ ಎಂಬುದು ಕಾಣುತ್ತಿದೆ. ಅಯೋಧ್ಯೆಯಲ್ಲಿ ಇದೇ 22ರಂದು ಶ್ರೀರಾಮನ ಪ್ರಾಣ ಪ್ರತಿಷ್ಠೆ ವಿಚಾರ ಗಮನಿಸಿ ಸಿದ್ದರಾಮಯ್ಯ ಮತ್ತು ಅವರ ಸಚಿವ ಸಂಪುಟದ ಎಲ್ಲರಿಗೂ ತಲೆ ಕೆಟ್ಟಿದೆ ಎಂದು ಟೀಕಿಸಿದರು.
ನಾನು ಕೂಡ ಆ ಸ್ಥಾನದಲ್ಲಿ ಇದ್ದವ. ಅಲ್ಲಿ ಕೂತವರು ತಮ್ಮ ಬುದ್ಧಿಯನ್ನು ರಾಜ್ಯದ ಹಿತಾಸಕ್ತಿಗೆ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಒಂದೂವರೆ ತಿಂಗಳಿನಿಂದ ಕಾಂಗ್ರೆಸ್ಸಿಗರ ಹೇಳಿಕೆ ಗಮನಿಸಿದರೆ ಹುಚ್ಚುಚ್ಚು ಮಾತುಗಳು ಕಂಡುಬಡುತ್ತವೆ. ಹರಿಪ್ರಸಾದ್ ಅವರ ಗೋಧ್ರಾ ಹೇಳಿಕೆ, ರಾಜಣ್ಣನ ಹೇಳಿಕೆ ಗಮನಿಸಿದ ಜನತೆ ಇನ್ನು ಸುಮ್ಮನೆ ಇರಲಾರರು ಎಂದು ಕಿವಿಮಾತು ಹೇಳಿದರು.