ಮಂಡ್ಯ, ಎ23(Daijiworld News/SS): ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ನನ್ನನ್ನು ಬೆಂಬಲಿಸಿದವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರ ಚುನಾವಣೆ ಪಕ್ಷೇತರ ಅಭ್ಯರ್ಥಿ ಸುಮಲತಾ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಅತಿ ಹೆಚ್ಚು ಮತದಾನ ಆಗಿರುವುದು ವಿಶೇಷವಾಗಿ ಮಹಿಳೆಯರ ಮತದಾನ ಕಳೆದ ಬಾರಿಗಿಂತಲೂ ಹೆಚ್ಚು ಆಗಿರುವುದು ನನ್ನ ಗೆಲುವಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು.
ಆದರೆ ನನ್ನನ್ನು ಚುನಾವಣೆಯಲ್ಲಿ ಬೆಂಬಲಿಸಿದ ಕೆಲವರಿಗೆ ಜೆಡಿಎಸ್ ಪಕ್ಷದ ಮುಖಂಡರು ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ನಾನು ದೂರು ನೀಡಿದರೆ ಪೊಲೀಸರು ಉದ್ದೇಶಪೂರ್ವಕವಾಗಿ ದೂರು ಸಹ ಸ್ವೀಕರಿಸುತ್ತಿಲ್ಲ ಎಂದು ತಿಳಿಸಿದರು.
ತಮ್ಮ ಬಳಿ ಅಳಲು ತೋಡಿಕೊಂಡ ಬೆಂಬಲಿಗರಿಗೆ ಸಮಾಧಾನ ಪಡಿಸಿದ ಸುಮಲತಾ, ತಾವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಈ ಬಗ್ಗೆ ಮಾತನಾಡುವುದಾಗಿ ಭರವಸೆ ನೀಡಿದರು.
ನಾನು ಸಿಂಗಾಪುರಕ್ಕೆ ಹೋಗಿದ್ದೇನೆ ಎಂದು ಸುಳ್ಳು ಸುದ್ದಿ ಹರಿಬಿಡಲಾಗಿದೆ. ನಾನು ಮಂಡ್ಯದಲ್ಲಿ ಇದ್ದೇನೆ, ನನಗೆ ಮಂಡ್ಯವೇ ಸಿಂಗಾಪುರ. ಏಪ್ರಿಲ್ 29ಕ್ಕೆ ಅಂಬರೀಶ್ ಅವರ ಹುಟ್ಟುಹಬ್ಬವನ್ನು ಮಂಡ್ಯದಲ್ಲಿ ಆಚರಿಸುತ್ತೇವೆ ಎಂದು ಹೇಳಿದರು.