ನವದೆಹಲಿ, ಜ 19 (DaijiworldNews/MS): ಐಐಟಿಯ ಮೊದಲ ಮಹಿಳಾ ನಿರ್ದೇಶಕಿಯಾಗಿ ಆಯ್ಕೆಯಾದ ಓರ್ವ ಸಾಧಕಿಯ ಯಶೋಗಾಥೆಯನ್ನು ತಿಳಿಯೋಣ.
ಡಾ ಪ್ರೀತಿ ಅಘಾಲಯಂ ಅವರು 1995 ರಲ್ಲಿ ಐಐಟಿ ಮದ್ರಾಸ್ನಿಂದ ತಮ್ಮ ಬಿಟೆಕ್ ಪದವಿ ಪಡೆದಿದ್ದು, 1996 ರಲ್ಲಿ ರೋಚೆಸ್ಟರ್ ವಿಶ್ವವಿದ್ಯಾಲಯದಿಂದ ಕೆಮಿಕಲ್ ಇಂಜಿನಿಯರಿಂಗ್ನಲ್ಲಿ ಎಂಎಸ್ ಪದವಿ ಪಡೆದರು. ಅವರು 2000 ರಲ್ಲಿ ಮ್ಯಾಸಚೂಸೆಟ್ಸ್ ಆಮ್ಹೆರ್ಸ್ಟ್ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪೂರ್ಣಗೊಳಿಸಿದರು.
ಅಘಾಲಯಂ ರವರು ಐಐಟಿ ಯ ಹಳೆಯ ವಿದ್ಯಾರ್ಥಿಯಾಗಿದ್ದು ಅವರು ಐಐಟಿ ಮದ್ರಾಸ್ ಜಂಜಿಬಾರ್ಗೆ ಮೊದಲ ಮಹಿಳಾ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.ಪ್ರಸ್ತುತ ಪ್ರೀತಿ ಅಘಾಲಯಂ ಅವರು ಐಐಟಿ ಮದ್ರಾಸ್ನಲ್ಲಿ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯಲ್ಲಿ ಸ್ಟೆಮ್ ನಲ್ಲಿರುವ 75 ಮಹಿಳೆಯರಲ್ಲಿ ಡಾ.ಪ್ರೀತಿ ಅಘಾಲಯಂ ಕೂಡ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ.ಅಷ್ಟೇ ಅಲ್ಲದೇ ಐಐಟಿ ಕ್ಯಾಂಪಸ್ ಅನ್ನು ಮುನ್ನಡೆಸುವ ಮೊದಲ ಮಹಿಳಾ ನಿರ್ದೇಶಕಿಯಾಗಿದ್ದು ಎಲ್ಲ ಮಹಿಳೆಯರಿಗೆ ಸ್ಪೂರ್ತಿ ಆಗಿದ್ದಾರೆ.
"ಐಐಟಿ ನಿರ್ದೇಶಕರಾದ ಮೊದಲ ಮಹಿಳೆ ಅಘಾಲಯಮ್ ಆಗಿದ್ದು ನಾವು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅನುಸರಿಸುತ್ತಿದ್ದೇವೆ ಮತ್ತು ಲಿಂಗ ಸಮತೋಲನವನ್ನು ತರುವ ಅಗತ್ಯ ಪ್ರಮುಖ ಗುರಿಗಳಲ್ಲಿ ಒಂದಾಗಿದೆ" ಎಂದು ಐಐಟಿ ಮದ್ರಾಸ್ ನಿರ್ದೇಶಕ ವಿ ಕಾಮಕೋಟಿ ಹೇಳಿದ್ದಾರೆ.