ಗುಜರಾತ್,ಏ 23 (Daijiworld News/MSP): 'ಐಇಡಿ ಸ್ಪೋಟಕಗಳಿಗಿಂತ ವೋಟರ್ ಐಡಿ ಹೆಚ್ಚು ಶಕ್ತಿಯುತ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅವರು ಗುಜರಾತ್ ರಾಜ್ಯದ ಅಹ್ಮದಾಬಾದ್ ಜಿಲ್ಲೆಯ ರಾನಿಪ್ ಮತಗಟ್ಟೆಯಲ್ಲಿ ಮತ ಚಲಾಯಿಸಿದರು, 'ಟೆರರಿಸ್ಟ್ ಗಳು ಬಳಸುವ ಐಐಡಿಗಿಂತ ಪ್ರಜಾಪ್ರಭುತ್ವದ ಶಕ್ತಿಯಾದ ಐಡಿ (ಎಪಿಕ್ ಕಾರ್ಡ್) ಹೆಚ್ಚು ಬಲಶಾಲಿ ಹಾಗೂ ಪ್ರಭಾವಶಾಲಿ. ಉಗ್ರರ ಅಸ್ತ್ರ ಐಇಡಿ, ಮೋಟರ್ ಐಡಿ ಪ್ರಜಾಪ್ರಜಾಪ್ರಭುತ್ವದ ಶಸ್ತ್ರವಾಗಿದೆ. ಆದ್ದರಿಂದ ವೋಟರ್ ಐಡಿಯ ಪ್ರಬಲತೆ ಬಗ್ಗೆ ಜನರು ಅರ್ಥಮಾಡಿಕೊಳ್ಳಬೇಕಾಗಿದೆ' ಎಂದು ಮತದಾನದ ಬಳಿಕ ಮೋದಿ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದರು.
ಮಾತ್ರವಲ್ಲದೆ ‘ಮತದಾನ ಮಾಡುವಾಗ ನನಗೆ ಕುಂಭ ಮೇಳದ ಸಂದರ್ಭ ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡುವ ಮನೋಭಾವ ಮೂಡುತ್ತದೆ. ನನ್ನ ತವರು ರಾಜ್ಯ ಗುಜರಾತ್ನಲ್ಲಿ ಮತದಾನದ ಅಮೂಲ್ಯ ಹಕ್ಕು ಚಲಾಯಿಸಿದಕ್ಕೆ ಹೆಮ್ಮೆಯಿದೆ. ಜನರು ಪ್ರಜ್ಞಾವಂತರು. ಯಾವುದು ಉತ್ತಮ, ಯಾವುದು ತಪ್ಪು ಎಂಬುದು ಅವರಿಗೆ ತಿಳಿದಿದೆ ಎಂದು ಪ್ರತಿಕ್ರಿಯೆ ನೀಡಿದರು.
ಮತ ಚಲಾವಣೆ ಮಾಡುದಕ್ಕೂ ಮೊದಲು ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ‘3ನೇ ಹಂತದ ಮತದಾನ ಮಾಡಬೇಕಿರುವ ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ಮತಗಟ್ಟೆಗಳತ್ತ ಬರಬೇಕು. ನಿಮ್ಮ ಮತ ಅಮೂಲ್ಯ. ನಮ್ಮ ದೇಶ ಸಾಗಲಿರುವ ದಾರಿಯನ್ನು ಮತದಾನ ನಿರ್ಧರಿಸಲಿದೆ’ ಎಂದು ಟ್ವೀಟ್ ಮಾಡಿದ್ದರು.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮತಗಟ್ಟೆಯ ಬಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದರು. ಈ ವೇಳೆ ಅಮಿತ್ ಶಾ ಅವರ ಮೊಮ್ಮಗಳನ್ನು ಪ್ರಧಾನಿ ನರೇಂದ್ರ ಮೋದಿ ಮುದ್ದಾಡಿದರು. ಮತದಾನ ಬಳಿಕ ಇಂಕ್ ಇದ್ದ ಬೆರಳನ್ನು ಹೆಮ್ಮೆಯಿಂದ ಪ್ರದರ್ಶಿಸುತ್ತಾ ಪಕ್ಷದ ಅಭ್ಯರ್ಥಿ ಹಂಸಮುಖ್ಭಾಯ್ ಸೋಮಭಾಯ್ ಪಟೇಲ್ ಅವರೊಂದಿಗೆ ಬೀದಿಗಳಲ್ಲಿ ಸಂಚರಿಸಿದರು.