ಬಳ್ಳಾರಿ, ಎ23(Daijiworld News/SS): ಇಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನದಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಪ್ರಮುಖ ಪಕ್ಷಗಳ ಹಲವಾರು ಘಟಾನುಘಟಿ ನಾಯಕರ ಭವಿಷ್ಯ ನಿರ್ಧಾರವಾಗಲಿದೆ. ಆದರೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಈ ಬಾರಿಯೂ ಮತದಾನ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ.
ಅಕ್ರಮ ಗಣಿಗಾರಿಕೆ ಕೇಸ್ನಲ್ಲಿ ಬಳ್ಳಾರಿ ಪ್ರವೇಶಿಸದಂತೆ ಕೋರ್ಟ್ ನಿಷೇಧ ಹೇರಿರುವ ಕಾರಣಕ್ಕೆ ಅವರಿಗೆ ಮತದಾನ ಮಾಡುವುದು ಸಾಧ್ಯವಾಗಲಿಲ್ಲ. ಮತದಾನಕ್ಕಾಗಿ ಬಳ್ಳಾರಿಗೆ ತೆರಳಲು ಅವಕಾಶ ನೀಡುವಂತೆ ರೆಡ್ಡಿ ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಆದರೆ ಕೋರ್ಟ್ ಅವಕಾಶ ನೀಡಲು ಸಾಧ್ಯವಿಲ್ಲ ಎಂದಿದೆ. ಹೀಗಾಗಿ ಮತದಾನ ಮಾಡುವ ಅವಕಾಶವನ್ನು ಅವರು ಕಳೆದುಕೊಂಡಿದ್ದಾರೆ.
ಮಾತ್ರವಲ್ಲ, ಗದಗ ಜಿಲ್ಲೆಯಲ್ಲಿ ಮತದಾರರ ಚೀಟಿ ಪಡೆಯಲು ನೊಂದಣಿ ಮಾಡಿರುವುದೂ ರದ್ದಾಗಿತ್ತು. ಜನಾರ್ದನ ರೆಡ್ಡಿ ಅವರಿಗೆ ವಿಧಾನಸಭಾ ಚುನಾವಣೆ, ಉಪಚುನಾವಣೆಯಲ್ಲೂ ಹಕ್ಕು ಚಲಾಯಿಸಲು ಸಾಧ್ಯವಾಗಿರಲ್ಲಿಲ್ಲ. ಇದೀಗ ಮತ್ತೆ ಲೋಕಸಭಾ ಚುನಾವಣೆಯಲ್ಲೂ ತಮ್ಮ ಹಕ್ಕು ಚಲಾಯಿಸುವ ಭಾಗ್ಯದಿಂದ ವಂಚಿತರಾಗಿದ್ದಾರೆ.