ಕಣ್ಣೂರು, ಏ 23 (Daijiworld News/MSP): ದೇಶದೆಲ್ಲೆಡೆ ಮಂಗಳವಾರ ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಕರ್ನಾಟಕ. ಕೇರಳ ಸೇರಿ 13 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ 117 ಲೋಕಸಭಾ ಕ್ಷೇತ್ರಗಳಲ್ಲಿ ಜನರು ಮತ ಚಲಾಯಿಸಲಿದ್ದಾರೆ.
ಆದರೆ ಕೇರಳದ ಕಣ್ಣೂರಿನಲ್ಲಿರುವ ಮಯ್ಯಿಲ್ ಕಂದಕ್ಕೈ ಬೂತ್ ನಲ್ಲಿ ಬಿಗಿಭದ್ರತೆಯಲ್ಲಿ ನಡೆಯುತ್ತಿರುವ ಮತದಾನ ಪ್ರಕ್ರಿಯೆಯಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾಕೆಂದರೆ ಭದ್ರತಾ ಸಿಬ್ಬಂದಿಗಳ ಕಣ್ಣುತಪ್ಪಿಸಿ ಜನರನ್ನು ಭಯಪಡಿಸುವಲ್ಲಿ ಈತ ಯಶಸ್ವಿಯಾಗಿದ್ದ. ಬಿಸಿಲ ಬೇಗೆ ಏರುತ್ತಿದೆ ಎಂದು ಮತದಾರ ಅದಷ್ಟು ಬೇಗ ವೋಟ್ ಮಾಡಿ ಹೊರಡೋಣ ಎಂದರೆ ಒಳಗೆ ಸೇರಿದ್ದ ಈತನನ್ನು ಕಂಡು ಮತಗಟ್ಟೆಯ ಭದ್ರತಾ ಸಿಬ್ಬಂದಿಗಳು ಕೂಡಾ ಬೆದರಿಬಿಟ್ಟಿದ್ದರು.
ಮಯ್ಯಿಲ್ ಕಂದಕ್ಕೈ ಮತಗಟ್ಟೆಯಲ್ಲಿ ಹಾವೊಂದು ಕಾಣಿಸಿಕೊಂಡು ಎಲ್ಲರನ್ನು ಕ್ಷಣಕಾಲ ಆತಂಕಕ್ಕೆ ದೂಡಿತ್ತು. ಯಾಕೆಂದರೆ ವಿವಿ ಪ್ಯಾಟ್ನ ಒಳಗೆ ಓಟಿನ ಚೀಟಿ ಬೀಳುವಾಗ ವಿವಿಪ್ಯಾಟ್ ಒಳಗೆ ಸೇರಿದ್ದ ಹಾವಿಗೆ ಕಿರಿಕಿರಿಯಾಗಿ ಮೆಲ್ಲನೆ ತಲೆಎತ್ತತೊಡಗಿತು. ಹಾವನ್ನ ನೋಡಿದ ಮತದಾರ ಹಾಗೂ ಚುನಾವಣಾಧಿಕಾರಿ ಹೌಹಾರಿದರು. ಕೊನೆಗೂ ಅಲ್ಲಿಂದ ಹಾವನ್ನು ಹರಸಾಹಸ ಪಟ್ಟು ಬೇರೆಡೆ ಸ್ಥಳಾಂತರ ಮಾಡಿದರು. ನಂತರ ಚುನಾವಣಾಧಿಕಾರಿಗಳು, ಮತದಾರರು ನಿಟ್ಟುಸಿರು ಬಿಟ್ಟು ಮತದಾನ ಪ್ರಕ್ರಿಯೆಯನ್ನ ಮುಂದುವರಿಸಿದರು.