ನವದೆಹಲಿ, ಜ 20 (DaijiworldNews/HR): ರಾಮ ಮಂದಿರದ ಬಗ್ಗೆ ಸುಳ್ಳು ಮತ್ತು ತಿರುಚಿದ ವಿಷಯವನ್ನು ಪ್ರಕಟಿಸಬೇಡಿ ಎಂದು ಕೇಂದ್ರ ಸರ್ಕಾರವು ಮಾಧ್ಯಮಗಳು ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಕೇಳಿಕೊಂಡಿದೆ.
ಜನವರಿ 22 ರಂದು ರಾಮ ಲಲ್ಲಾನ ಪ್ರಾಣ-ಪ್ರತಿಷ್ಠೆಯೊಂದಿಗೆ ರಾಮ ಮಂದಿರವನ್ನು ಉದ್ಘಾಟಿಸಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಒಂದು ವಾರ ಮುಂಚಿತವಾಗಿ, ಜನವರಿ 16 ರಂದು ವಿಧಿವಿಧಾನ ಆಚರಣೆಗಳು ಪ್ರಾರಂಭಗಿದೆ. ಸಮಾರಂಭದ ಮುಂಚೆಯೇ, ವಿಐಪಿ ಟಿಕೆಟ್ಗಳು, ರಾಮಮಂದಿರ ಪ್ರಸಾದವನ್ನು ಒದಗಿಸುವುದಾಗಿ ಹೇಳಿಕೊಳ್ಳುವ ಹಲವಾರು ವಂಚನೆಯ ಲಿಂಕ್ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ
ಇನ್ನು ಕೆಲವು ಪರಿಶೀಲಿಸದ, ಪ್ರಚೋದನಕಾರಿ ಮತ್ತು ನಕಲಿ ಸಂದೇಶಗಳನ್ನು ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗುತ್ತಿದ್ದು, ಇದು ಕೋಮು ಸೌಹಾರ್ದತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುತ್ತದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ.