ಹುಬ್ಬಳ್ಳಿ ,23 (Daijiworld News/AZM): ರಮೇಶ್ ಜಾರಕಿಹೊಳಿ ಜೊತೆಗೆ ಹಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದು, ಯಾವಾಗ ಬೇಕಾದರೂ ಮೈತ್ರಿ ಸರ್ಕಾರ ಪತನವಾಗಬಹುದು ಎಂದು ಹೇಳುವ ಮೂಲಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಹುಬ್ಬಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶೆಟ್ಟರ್, ಬಿಜೆಪಿಯ ಶಾಸಕ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮೈತ್ರಿ ಸರ್ಕಾರ ಯಾವುದೇ ಕ್ಷಣದಲ್ಲಿಯಾದರೂ ಪತನವಾಗಬಹುದು. ರಮೇಶ್ ಜಾರಕಿಹೊಳಿಯವರ ಜೊತೆಗೆ ಹಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ದೇವೇಗೌಡರು, ಸಿದ್ದರಾಮಯ್ಯನವರ ಹೇಳಿಕೆ ನೋಡಿದ್ರೇ, ದೋಸ್ತಿ ಅಭ್ಯರ್ಥಿಗಳು ಸೋಲುತ್ತಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿನ ಒಳಬೇಗುದಿ ಮತ್ತೆ ಹೊರಗೆ ಬರುತ್ತೆ ಎಂದರು.
ಇನ್ನೂ ಮುಂದುವರೆದು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಮೇಲೆ, ನಾವು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ರಮೇಶ್ ಜಾರಕಿಹೊಳಿಯವರ ರಾಜೀನಾಮೆಯೇ ರಾಜ್ಯ ಸರ್ಕಾರದ ಪತನಕ್ಕೆ ಪ್ರಾರಂಭದ ಹಾದಿಯಾಗಲಿದೆ ಎಂದರು.