ಅಯೋಧ್ಯೆ, ಜ 22 (DaijiworldNews/AA): ಅಯೋಧ್ಯೆಯಲ್ಲಿ ನಿರ್ಮಾಣವಾದ ರಾಮಮಂದಿರವು ಇಂದು ಲೋಕಾರ್ಪಣೆಗೊಂಡಿದ್ದು, ರಾಮಲಲ್ಲಾನ ಪ್ರಾಣಪ್ರತಿಷ್ಠೆ ಹಲವಾರು ಗಣ್ಯರ ಸಮ್ಮುಖದಲ್ಲಿ ಸಂಪನ್ನವಾಗಿದೆ. ಈ ಭವ್ಯವಾದ ರಾಮಮಂದಿರದ ನಿರ್ಮಾಣದ ಸಂಧರ್ಭದಲ್ಲಿ ಟೈಮ್ ಕ್ಯಾಪ್ಸ್ಯೂಲ್ ಇರಿಸಲಾಗಿದ್ದು, ಇದು ರಾಮ ಜನ್ಮ ಭೂಮಿಯ ಸಂಪೂರ್ಣ ಇತಿಹಾಸವನ್ನು ಒಳಗೊಂಡಿದೆ.
3 ಅಡಿ ಉದ್ದದ ತಾಮ್ರದ ಪಾತ್ರೆಯಲ್ಲಿ ಈ ಟೈಮ್ ಕ್ಯಾಪ್ಸ್ಯೂಲ್ ಇದ್ದು, ಇದರೊಳಗಡೆ ಇರುವ ಪತ್ರದಲ್ಲಿ ಸಂಸೃತ ಭಾಷೆಯನ್ನು ಬಳಸಲಾಗಿದೆ. ದೀರ್ಘವಾಕ್ಯವನ್ನು ಸಹ ಕೆಲವೇ ಕೆಲವು ಪದಗಳನ್ನು ಬಳಸಿ ಬರೆಯಲು ಸಾಧ್ಯವಿರುವ ಕಾರಣ ಸಂಸೃತ ಭಾಷೆಯನ್ನು ಇದರಲ್ಲಿ ಬಳಸಲಾಗಿದೆ.
ಟೈಮ್ ಕ್ಯಾಪ್ಸ್ಯೂಲ್ ಅನ್ನು ರಾಮ ಮಂದಿರವಿರುವ ಸ್ಥಳದ ಕೆಳಗೆ ಸುಮಾರು 2000 ಅಡಿ ಆಳದಲ್ಲಿ ಹೂತಿಡಲಾಗಿದ್ದು, ಇದರೊಳಗೆ ಅಯೋಧ್ಯೆ, ಶ್ರೀರಾಮನ ಹಾಗೂ ರಾಮಜನ್ಮಭೂಮಿಯ ಸಂದೇಶವನ್ನು ಇರಿಸಲಾಗಿದೆ. ಈ ಟೈಮ್ ಕ್ಯಾಪ್ಸ್ಯೂಲ್ ನಲ್ಲಿರುವ ಸಂದೇಶವನ್ನು ಸಾವಿರಾರು ವರ್ಷಗಳು ಕಳೆದರೂ ಮಾಸಿಹೋಗದಂತೆ ಆಸಿಡ್ ಮುಕ್ತ ಹಾಳೆಯಲ್ಲಿ ಬರೆಯಲಾಗಿದೆ.
ಇನ್ನು ಈ ಟೈಮ್ ಕ್ಯಾಪ್ಸ್ಯೂಲ್ ಅನ್ನು ಭವಿಷ್ಯದಲ್ಲಿ ಈ ಸ್ಥಳದಲ್ಲಿ ರಾಮಮಂದಿರವೊಂದು ಇತ್ತು ಎಂಬ ಕುರುಹಿಗಾಗಿ, ಭವಿಷ್ಯದ ಪೀಳಿಗೆಗಳಿಗಾಗಿ ರಾಮಮಂದಿರದ ಇತಿಹಾಸದ ಬಗ್ಗೆ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಸಂರಕ್ಷಿಸಿ ಇಡುವ ಉದ್ದೇಶದಿಂದ ಇದನ್ನು ಅಳವಡಿಸಲಾಗಿದೆ. ಮತ್ತು ಈ ಸ್ಥಳದ ಬಗ್ಗೆ ಭವಿಷ್ಯದಲ್ಲಿ ತಲೆದೋರಬಹುದಾದ ಯಾವುದೇ ವಿವಾದವನ್ನು ತಪ್ಪಿಸುವ ಉದ್ದೇಶದಿಂದ ಮಾಹಿತಿ ತುಂಬಿದ ಈ ಕ್ಯಾಪ್ಸೂಲ್ ಅನ್ನು ಮಂದಿರದ ಕೆಳಗೆ ಇರಿಸಲಾಗಿದೆ.
ಟೈಮ್ ಕ್ಯಾಪ್ಸುಲ್ ನ ವಿಶೇಷತೆ
ಟೈಮ್ ಕ್ಯಾಪ್ಸುಲ್ ಐತಿಹಾಸಿಕ ಮಾಹಿತಿಯ ಸಂಗ್ರಹವಾಗಿದೆ. ಇದನ್ನು ಅಲ್ಯೂಮಿನಿಯಂ, ಸ್ಟೇನ್ಲೆಸ್ ಸ್ಟೀಲ್ ಅಥವಾ ತಾಮ್ರದಂತಹ ಲೋಹಗಳಿಂದ ತಯಾರಿಸಲಾಗಿದೆ. ಸಾವಿರಾರು ವರ್ಷಗಳು ಕಳೆದರೂ ಟೈಮ್ ಕ್ಯಾಪ್ಸುಲ್ ಹಾಳಾಗದಂತೆ ನಿರ್ಮಾಣಮಾಡಲಾಗಿದೆ.