ಬೆಂಗಳೂರು,23 (Daijiworld News/AZM):ಬಿಜೆಪಿಯವರು ನಡೆಸುತ್ತಿರುವ ರಾಜಕಾರಣವನ್ನು ನೋಡಿ ಬೇಸತ್ತು ಹಲವಾರು ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಸೇರಲು ಸಿದ್ಧವಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಲೋಕಸಭಾ ಚುನಾವಣೆಯ ಬಳಿಕ ಕೇಂದ್ರದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬರಲಿ. ಆಗ ಬಿಜೆಪಿಯವರ ಆಪರೇಷನ್ ಕಮಲವೂ ಬಿದ್ದು ಹೋಗಲಿದೆ. ಹೊಸ ಸರಕಾರ ಬರುತ್ತಿದ್ದಂತೆ ಬಿಜೆಪಿಯವರ ಪಾಲಿಗೆ ಐಟಿ, ಸಿಬಿಐ, ಇಡಿ ಮೂಲಕ ಬ್ಲಾಕ್ಮೇಲ್ ಮಾಡುವುದು ಎಲ್ಲವೂ ಮುಗಿದ ಅಧ್ಯಾಯವಾಗಲಿದೆ. ನಮ್ಮ ಮೈತ್ರಿ ಸರಕಾರಕ್ಕೆ ಏನು ಆಗುವುದಿಲ್ಲ. ಬಿಜೆಪಿಯವರಿಗೆ ಮತ್ತೊಮ್ಮೆ ಭ್ರಮನಿರಸನವಾಗಲಿದೆ. ಆಪರೇಷನ್ ಕಮಲ ಅವರಿಗೆ ತಿರುಗುಬಾಣವಾಗುತ್ತದೆ ಎಂದು ಗುಂಡೂರಾವ್ ಹೇಳಿದ್ದಾರೆ.
ಶಾಸಕ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿರುವ ದಿನೇಶ್ಗುಂಡೂರಾವ್, ಅವರು ಯಾವ ನಿರ್ಧಾರ ಬೇಕಾದರೂ ತೆಗೆದುಕೊಳ್ಳಬಹುದು. ಈಗಾಗಲೇ ಅವರನ್ನು ಹಲವು ಬಾರಿ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಈ ಬಗ್ಗೆ ಲೋಕಸಭೆಯ ಚುನಾವಣಾ ಫಲಿತಾಂಶದ ಬಳಿಕ ಏನಾಗುತ್ತದೆ ಎಂದು ನೋಡುವ ಎಂದು ತಿಳಿಸಿದರು.