ನವದೆಹಲಿ, ಜ 22 (DaijiworldNews/SK): ಅಯೋಧ್ಯೆ ರಾಮಮಂದಿರದ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪಷ್ಠೆ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಸೂರ್ಯೋದಯ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ ಅವರು, ಅಯೋಧ್ಯೆಯಿಂದ ಹಿಂದಿರುಗಿದ ನಂತರ ನಾನು ತೆಗೆದುಕೊಂಡ ಮೊದಲ ನಿರ್ಧಾರವೆಂದರೆ ನಮ್ಮ ಸರ್ಕಾರವು 1 ಕೋಟಿ ಮನೆಗಳಿಗೆ ಮೇಲ್ಛಾವಣಿಯ ಸೋಲಾರ್ ಅಳವಡಿಸುವ ಗುರಿಯೊಂದಿಗೆ “ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ” ಯನ್ನು ಆರಂಭಿಸುತ್ತದೆ.
ಜಗತ್ತಿನ ಎಲ್ಲಾ ಭಕ್ತರು ಯಾವಾಗಲೂ ಸೂರ್ಯವಂಶಿ ಭಗವಾನ್ ಶ್ರೀರಾಮನ ಬೆಳಕಿನಿಂದ ಶಕ್ತಿಯನ್ನು ಪಡೆಯುತ್ತಾರೆ. ಇಂದು, ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆಯ ಶುಭ ಸಂದರ್ಭದಲ್ಲಿ, ಭಾರತದ ಜನರು ತಮ್ಮದೇ ಆದ ಸೌರ ಛಾವಣಿಯ ವ್ಯವಸ್ಥೆಯನ್ನು ಹೊಂದಿರಬೇಕು ಎಂಬ ನನ್ನ ಸಂಕಲ್ಪವು ಮತ್ತಷ್ಟು ಗಟ್ಟಿಗೊಂಡಿದೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರ ಘೋಷಣೆಯ ಪ್ರಕಾರ, ಈ ಯೋಜನೆ ಅಡಿಯಲ್ಲಿ ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಕಡಿಮೆಯಾಗುತ್ತದೆ. ಇದರೊಂದಿಗೆ ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.