ಅಮೃತ್ ಸರ್,23(Daijiworld News/AZM): ಬಿಜೆಪಿ ಪಕ್ಷಕ್ಕೆ ಇಂದು ಅಧಿಕೃತವಾಗಿ ಸೇರ್ಪಡೆಯಾಗಿರುವ ಬಾಲಿವುಡ್ ನಟ ಸನ್ನಿ ಡಿಯೋಲ್ ಅವರು ಗುರ್ ದಾಸ್ಪುರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಇಂದು ಸಂಜೆಯ ವೇಳೆಗೆ ಬಿಜೆಪಿ ತನ್ನ 26ನೇ ಪಟ್ಟಿಯನ್ನು ಪ್ರಕಟಿಸಿದೆ. ಸನ್ನಿ ಡಿಯೋಲ್ ಅವರು ಗುರ್ ದಾಸ್ಪುರ್ ಅಥವಾ ಅಮೃತಸರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳು ಕಂಡು ಬಂದಿದ್ದು, ಕೊನೆಗೆ ಗುರ್ ದಾಸ್ಪುರ್ ನಿಂದ ಸ್ಪರ್ಧಿಸುವಂತೆ ಸನ್ನಿಗೆ ಟಿಕೆಟ್ ದೊರಕಿದೆ. ಇನ್ನು ಚಂದೀಗಢದಿಂದ ಕಿರಣ್ ಖೇರ್ ಹಾಗೂ ಪಂಜಾಬಿನ ಹೋಶಿಯಾರ್ ಪುರ್ ನಿಂದ ಸೋಮ್ ಪ್ರಕಾಶ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ಪಂಜಾಬಿನ ಈ ಕ್ಷೇತ್ರವನ್ನು ಹಿರಿಯ ನಟ ವಿನೋದ್ ಖನ್ನಾ ಪ್ರತಿನಿಧಿಸುತ್ತಿದ್ದರು. 2017ರಲ್ಲಿ ವಿನೋದ್ ಖನ್ನಾ ಅವರ ಮರಣ ನಂತರ ಅವರ ಪತ್ನಿ ಕವಿತಾ ಖನ್ನ ಅಥವಾ ಅಕ್ಷಯ್ ಖನ್ನಾ ಅವರನ್ನು ಕರೆ ತರುವ ಸುದ್ದಿ ಹಬ್ಬಿತ್ತು. ಆದರೆ, ಈಗ ಸನ್ನಿ ಡಿಯೋಲ್ ಗೆ ಟಿಕೆಟ್ ಸಿಕ್ಕಿದೆ
ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದ ಬಳಿಕ ಮಾತನಾಡಿದ ಸನ್ನಿ ಡಿಯೋಲ್, ನನ್ನ ತಂದೆಯವರು ಅಟಲ್ ಜೀ ಬೆಂಬಲಿಸಿ, ಅವರೊಂದಿಗೆ ಕಾರ್ಯನಿರ್ವಹಿಸಿದ್ದರು. ಈಗ ನಾನು ಮೋದಿ ಜೀ ಜತೆ ಕಾರ್ಯನಿರ್ವಹಿಸಲು ಬಯಸಿದ್ದೇನೆ ಎಂದಿದ್ದಾರೆ.