ನವದೆಹಲಿ, ಜ 23 (DaijiworldNews/MS): ಮುಂಬರುವ ಮಧ್ಯಂತರ ಬಜೆಟ್ನಲ್ಲಿ 2024-25ರ ಆರ್ಥಿಕ ವರ್ಷದಲ್ಲಿ ಕೃಷಿ ಸಾಲದ ಗುರಿಯನ್ನು ₹ 22-25 ಲಕ್ಷ ಕೋಟಿಗೆ ಹೆಚ್ಚಿಸುವುದಾಗಿ ಸರ್ಕಾರ ಘೋಷಿಸಬಹುದು ಎಂದು ವರದಿಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 20 ಲಕ್ಷ ಕೋಟಿಯಷ್ಟು ಕೃಷಿ ಸಾಲದ ಗುರಿಯನ್ನು ಸರ್ಕಾರ ಹೊಂದಿದೆ.
ಕೇಂದ್ರೀಕೃತ ವಿಧಾನದ ಭಾಗವಾಗಿ ಕೃಷಿ ಸಚಿವಾಲಯವು 'ಕ್ರೆಡಿಟ್' (ಸಾಲಗಳಿಗಾಗಿ) ಪ್ರತ್ಯೇಕ ವಿಭಾಗವನ್ನು ಸಹ ರಚಿಸಿದೆ. ಕೃಷಿ ಸಾಲದ ಗುರಿ ₹ 22-25 ಲಕ್ಷ ಕೋಟಿಗೆ ಗಣನೀಯವಾಗಿ ಹೆಚ್ಚಿಸುವುದರಿಂದ ಇದು ಪ್ರತಿಯೊಬ್ಬ ಅರ್ಹ ರೈತರಿಗೆ ಸಾಂಸ್ಥಿಕ ಸಾಲ ದೊರಕುವುದನ್ನು ಖಚಿತಪಡಿಸುತ್ತದೆ ಎಂದು ವರದಿ ತಿಳಿಸಿದೆ.
ಪ್ರಸ್ತುತ, ಸರ್ಕಾರವು ಎಲ್ಲಾ ಹಣಕಾಸು ಸಂಸ್ಥೆಗಳಿಗೆ ಮೂರು ಲಕ್ಷದವರೆಗಿನ ಅಲ್ಪಾವಧಿಯ ಕೃಷಿ ಸಾಲಗಳ ಮೇಲೆ ಶೇಕಡಾ 2ರಷ್ಟು ಬಡ್ಡಿ ರಿಯಾಯಿತಿಯನ್ನು ಒದಗಿಸುತ್ತದೆ. ಅಂದರೆ ರೈತರು ವರ್ಷಕ್ಕೆ ಶೇ.7ರಷ್ಟು ರಿಯಾಯಿತಿ ದರದಲ್ಲಿ 3 ಲಕ್ಷ ರೂ.ವರೆಗೆ ಕೃಷಿ ಸಾಲ ಪಡೆಯುತ್ತಿದ್ದಾರೆ. ಸಕಾಲದಲ್ಲಿ ಮರುಪಾವತಿ ಮಾಡುವ ರೈತರಿಗೆ ವಾರ್ಷಿಕ ಶೇ.3ರಷ್ಟು ಹೆಚ್ಚುವರಿ ಬಡ್ಡಿ ರಿಯಾಯಿತಿಯನ್ನೂ ನೀಡಲಾಗುತ್ತಿದೆ. ಆದರೆ ಬಡ್ಡಿ ದರವು ಮಾರುಕಟ್ಟೆ ದರಕ್ಕೆ ಅನುಗುಣವಾಗಿರುತ್ತದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ, ಡಿಸೆಂಬರ್ 2023 ರವರೆಗೆ ₹ 20 ಲಕ್ಷ ಕೋಟಿಗಳ ಕೃಷಿ ಸಾಲದ ಗುರಿಯಲ್ಲು ಸುಮಾರು 82% ರಷ್ಟು ಸಾಧಿಸಲಾಗಿದೆ. ಈ ಅವಧಿಯಲ್ಲಿ ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್ಗಳಿಂದ ಸುಮಾರು ₹ 16.37 ಲಕ್ಷ ಕೋಟಿ ಸಾಲವನ್ನು ವಿತರಿಸಲಾಗಿದೆ ಎಂದು ಅಧಿಕೃತ ಅಂಕಿಅಂಶಗಳು ಹೇಳಿದೆ.