ಅಯೋಧ್ಯೆ, ಜ 23 (DaijiworldNews/MS): ಅಯೋಧ್ಯೆಯ ನೂತನ ರಾಮ ಮಂದಿರವು ಜನವರಿ 23ರ ಇಂದಿನಿಂದ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಿದೆ. ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯ ಸೋಮವಾರ ಸಂಪನ್ನಗೊಂಡಿದ್ದು, ಮುಂದೆ 48 ದಿನಗಳ ಮಂಡಲೋತ್ಸವ ನಡೆಯಲಿದೆ.
48 ದಿನಗಳ ಕಾಲ ಅವಧಿಯೇ ಒಂದು ಮಂಡಲ. ಪ್ರಾಣಪ್ರತಿಷ್ಠೆಯ 48 ದಿನಗಳ ಕಾಲ ನಿತ್ಯ ಪ್ರತಿಮೆಗೆ ಶಕ್ತಿ ತುಂಬುವ ಕೆಲಸ ಜನವರಿ 23ರಿಂದ 48 ದಿನಗಳ ಕಾಲ ಮಂಡಲ ಪೂಜೆಯು ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ.
ಶ್ರೀ ಪೇಜಾವರ ವಿಶ್ವೇಶತೀರ್ಥ ಶ್ರೀ ಪಾದರು ಬೆಂಗಳೂರಿನಲ್ಲಿ ಸ್ಥಾಪಿಸಿರುವ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಧ್ಯಯನ ಮಾಡಿರುವ ಅನೇಕ ವಿದ್ವಾಂಸರು ದೇಶದ ಬೇರೆ ಬೇರೆ ಭಾಗಗಳಲ್ಲಿದ್ದಾರೆ.ಇವರ ಜತೆಗೆ ದೇಶದ ಬೇರೆ ಭಾಗದ ವಿದ್ಯಾಪೀಠಗಳಲ್ಲಿ ಅಧ್ಯಯನ ಮಾಡಿರುವ ವಿದ್ವಾಂಸರಿದ್ದಾರೆ. ಪೂರ್ಣಪ್ರಜ್ಞ ವಿದ್ಯಾಪೀಠದ ಮುಂದಾಳತ್ವದಲ್ಲಿ ಅನೇಕ ವಿದ್ವಾಂಸರೊಂದಿಗೆ ಮಂಡಲೋತ್ಸವ ನೆರವೇರಲಿದೆ. ಮೊದಲ 44 ದಿನ ನಿತ್ಯವೂ ಹೋಮ, ಹವನಗಳ ಜತೆಗೆ ಕಲಾಶಾಭಿಷೇಕ, ಪ್ರತಿಮೆಗೆ ತತ್ವನ್ಯಾಸ ಇತ್ಯಾದಿ ವಿಧಿವಿಧಾನಗಳು ನಡೆಯಲಿವೆ. ಪ್ರತಿನಿತ್ಯ ಸಂಜೆ ಉತ್ಸವ ನಡೆಯಲಿದೆ. ಕೊನೆಯ ನಾಲ್ಕು ದಿನಗಳ ಕಾಲ ಬ್ರಹ್ಮಕಲಶಾಭಿಷೇಕದ ರೀತಿಯಲ್ಲಿ ಸಹಸ್ರ ಕಲಶಾಭಿಷೇ ಕ ಜರಗಲಿದೆ.
ಮೊದಲ 44 ದಿನ 2 ಮಂತ್ರದ ಆರಾಧನೆ:
ಜಪ, ಹೋಮ, ತರ್ಪಣ ಜೊತೆಗೆ ಪ್ರತಿಮೆಗೆ ಕಲಶಾಭಿಷೇಕ ನಡೆಯುತ್ತದೆ. ಬೆಳಿಗ್ಗೆ ಯಜ್ಞ, ಯಾಗ, ಕಲಶ ಅಭಿಷೇಕ ನಡೆಯುತ್ತದೆ. ಮುಸ್ಸಂಜೆ ಬಳಿಕ ವೇದ ಪಾರಾಯಣ, ಅಷ್ಟಾದಶ ಪುರಾಣ ಪಾರಾಯಣ, ರಾಮಾಯಣ, ಮಹಾಭಾರತ ಪಾರಾಯಣ ನಡೆಯಲಿದೆ. ಮುಸ್ಸಂಜೆ ನಿತ್ಯ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ದೇವರ ವಿಗ್ರಹ ಇಟ್ಟು ಆರಾಧನೆ ಮಾಡಲಾಗುತ್ತದೆ. ನೃತ್ಯ, ವಾದ್ಯ ಸಹಿತ ಶೋಡಷೋಪಚಾರ ಪೂಜೆ ಜರುಗಲಿದೆ.