ಜೈಪುರ, ಜ 25 (DaijiworldNews/AA): 75ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಇಂದು ಮಧ್ಯಾಹ್ನ 2:30ಕ್ಕೆ ಜೈಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಾರೆ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ರಾಜಸ್ಥಾನದ ರಾಜ್ಯಪಾಲ ಕಾಲ್ರಾಜ್ ಮಿಶ್ರಾ ಮತ್ತು ಸಿಎಂ ಭಜನ್ ಲಾಲ್ ಶರ್ಮಾ ಅವರು ಸ್ವಾಗತಿಸಿದರು. ಅಧ್ಯಕ್ಷ ಮ್ಯಾಕ್ರನ್ ಅವರು ಎರಡು ದಿನಗಳ ಕಾಲ ಭಾರತ ಪ್ರವಾಸವನ್ನು ಕೈಗೊಂಡಿದ್ದು, ಭೇಟಿಯ ವೇಳೆ ಜೈಪುರದ ಅಂಬೇರ್ ಕೋಟೆ ಹಾಗೂ ಹವಾ ಮಹಲ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇನ್ನು ಇಂದು ಮಧ್ಯಾಹ್ನ ಜೈಪುರಕ್ಕೆ ಬಂದ ಅವರು ರಾತ್ರಿ 8:50 ರ ಸುಮಾರಿಗೆ ದೆಹಲಿಗೆ ತೆರಳಲಿದ್ದಾರೆ.
ಜೈಪುರದಲ್ಲಿ ಉಳಿದುಕೊಳ್ಳುವ 6 ಗಂಟೆಗಳಲ್ಲಿ ಮ್ಯಾಕ್ರನ್ ಅವರು ನರೇಂದ್ರ ಮೋದಿ ಅವರೊಂದಿಗೆ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ತಾಜ್ ರಾಂಬಾಗ್ ಅರಮನೆಯಲ್ಲಿ ಉಭಯ ನಾಯಕರ ದ್ವಿಪಕ್ಷೀಯ ಮಾತುಕತೆ ನಡೆಯಲಿದ್ದು, ಡಿಜಿಟಲ್ ಡೊಮೇನ್, ರಕ್ಷಣೆ, ವ್ಯಾಪಾರ, ಶುದ್ಧ ಇಂಧನ ಮತ್ತು ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ನಿಯಮಗಳ ಸರಾಗಗೊಳಿಸುವಿಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾತುಕತೆ ನಡೆಯಲಿದೆ.
ಈ ದ್ವಿಪಕ್ಷೀಯ ಮಾತುಕತೆಯಲ್ಲಿ ಪ್ರಧಾನಿ ಮೋದಿ ಹಾಗೂ ಮ್ಯಾಕ್ರನ್ ಅವರು, ಭಾರತದ ಪ್ರಸ್ತಾವಿತ 26 ರಫೇಲ್-ಎಂ ಯುದ್ಧ ವಿಮಾನಗಳು ಹಾಗೂ 3 ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳ ಖರೀದಿ, ಇಂಡೋ-ಪೆಸಿಫಿಕ್, ಹಮಾಸ್-ಇಸ್ರೇಲ್ ಸಂಘರ್ಷ, ಕೆಂಪು ಸಮುದ್ರದಲ್ಲಿನ ಪರಿಸ್ಥಿತಿ ಹಾಗೂ ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಸಹಕಾರ ಒದಗಿಸುವ ಬಗ್ಗೆ ಚರ್ಚೆ ನಡೆಸುವ ನಿರೀಕ್ಷೆ ಇದೆ. ಇನ್ನು ಇಂದು ರಾತ್ರಿ 7:10 ರ ಸುಮಾರಿಗೆ ಅಧ್ಯಕ್ಷ ಮ್ಯಾಕ್ರನ್ ಅವರು ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ.