ಉತ್ತರ ಪ್ರದೇಶ, ಜ 25 (DaijiworldNews/AA): ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ ಸಂಪನ್ನವಾಗಿದೆ. ಇದೀಗ ರಾಷ್ಟ್ರ ಪ್ರತಿಷ್ಠೆಯನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯುವ ಸಮಯ ಬಂದಿದೆ ಎಂದು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, 2047ರ ಹೊತ್ತಿಗೆ ಭಾರತವವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಕೆಲವು ದಶಕಗಳವರೆಗೆ ಅಭಿವೃದ್ಧಿಯು ಕೆಲ ಪ್ರದೇಶಗಳಿಗೆ ಸೀಮಿತವಾಗಿತ್ತು. ದೇಶದ ಹೆಚ್ಚಿನ ಪ್ರದೇಶಗಳು ಅಭಿವೃದ್ಧಿಯಿಂದ ವಂಚಿತವಾಗಿತ್ತು. ಇದರಲ್ಲಿ ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯ ಉತ್ತರ ಪ್ರದೇಶ ಕೂಡ ಒಂದು ಎಂದರು.
ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸಿದವರು ಬಹಳ ಕಾಲ ಆಡಳಿತಗಾರರಂತೆ ನಡೆದುಕೊಂಡಿರುವುದು ಇದಕ್ಕೆ ಕಾರಣ. ಜನರನ್ನು ಬಡತನದಲ್ಲಿಟ್ಟು ಸಮಾಜದಲ್ಲಿ ಒಡಕು ಉಂಟುಮಾಡುವುದು ಅವರಿಗೆ ಸುಲಭದ ದಾರಿಯಾಗಿ ಕಂಡಿತು ಎಂದಿದ್ದಾರೆ.
ಇನ್ನು ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ಇಂದು ಪ್ರಧಾನಿ ಮೋದಿ ಅವರು ಸುಮಾರು 19,100 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದರು. ಈ ಸಂದರ್ಭ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೂಡ ಉಪಸ್ಥಿತರಿದ್ದರು.