ಕೊಡಗು, ಜ 25 (DaijiworldNews/AA): ಅಂದು ಕೊಡಗಿಗೆ ಬಂದಾಗ ಕಿಡಿಗೇಡಿಗಳು ನನ್ನ ಮೇಲೆ ಮೊಟ್ಟೆ ಎಸೆದಿದ್ರು, ಇಂದು ಕೊಡಗಿನ ಜನಸಮೂಹ ಹೂಮಳೆ ಸುರಿಸಿದ್ದಾರೆ ಎಂದು ಸಿಎಂ ಸಿದ್ಧರಾಮಯ್ಯ ಅವರು ತಿಳಿಸಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರು, 'ವಿರೋಧ ಪಕ್ಷದ ನಾಯಕನಾಗಿ ಕೊಡಗಿಗೆ ಬಂದಿದ್ದಾಗ ಕೆಲ ಕಿಡಿಗೇಡಿಗಳು ನನ್ನ ಮೇಲೆ ಮೊಟ್ಟೆ ಎಸೆದಿದ್ದರು. ಇಂದು ಮುಖ್ಯಮಂತ್ರಿಯಾಗಿ ಬಂದಾಗ ಕೊಡಗಿನ ಸಮಸ್ತ ಸಜ್ಜನ ಜನಸಮೂಹ ಪ್ರೀತಿಯ ಹೂಮಳೆಯಲ್ಲಿ ನನ್ನನ್ನು ಮುಳುಗಿಸಿದೆ. ಇದು ಕೊಡಗಿನ ಸಜ್ಜನರ ಗೆಲುವು, ಇದೇ ಪ್ರಜಾಪ್ರಭುತ್ವದ ಸೌಂದರ್ಯ' ಎಂದು ಬರೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಳೆದ ಎರಡು ದಿನಗಳಿಂದ ಜಿಲ್ಲಾ ಪ್ರವಾಸದಲ್ಲಿದ್ದು, ನಿನ್ನೆ ಮೈಸೂರು ಜಿಲ್ಲೆಯನ್ನು ಮುಗಿಸಿ ಇಂದು ಕೊಡಗಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಕೊಡಗಿನ ಜನ ಹೂಮಳೆ ಸುರಿಸುವ ಮೂಲಕ ಸಿಎಂ ಸಿದ್ಧರಾಮಯ್ಯ ಅವರಿಗೆ ಅದ್ಧೂರಿಯಾಗಿ ಸ್ವಾಗತಿಸಿದೆ.
ಈ ಹಿಂದೆ ಸಿಎಂ ಸಿದ್ಧರಾಮಯ್ಯ ಅವರು ವಿಪಕ್ಷ ನಾಯಕನಾಗಿದ್ದ ವೇಳೆ ಮಡಿಕೇರಿಯಲ್ಲಿ ಮಳೆಯಿಂದಾದ ಹಾನಿಯನ್ನು ಪರಿಶೀಲನೆ ನಡೆಸಲು ಹೋದ ಸಂದರ್ಭ ಕೆಲ ಕಿಡಿಗೇಡಿಗಳು ಅವರ ಕಾರಿನ ಮೇಲೆ ಮೊಟ್ಟೆ ಎಸೆದಿದ್ದರು.