ನವದೆಹಲಿ,ಜ 26 (DaijiworldNews/RA):ಇಂದು ದೇಶದಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ,ಸಡಗರ ಮನೆ ಮಾಡಿದೆ.ದೆಹಲಿಯ ಕರ್ತವ್ಯ ಪಥದಲ್ಲಿ ಪರೇಡ್ ಗೆ ಕ್ಷಣಗಣನೆ ಶುರುವಾಗಿದೆ. ಕಳೆದ ಬಾರಿಯಂತೆ ಇಂದು ಕೂಡ ಗಣರಾಜ್ಯೋತ್ಸವವು ಹತ್ತು - ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಲಿದೆ.
ಇತ್ತ ರಾಷ್ಟ್ರರಾಜಧಾನಿ ದೆಹಲಿಯಲ್ಲಂತೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ.ಗಣತಂತ್ರದ ಪರೇಡ್ ಚಲನದ ಇತಿಹಾಸದಲ್ಲಿ ಮೊದಲ ಬಾರಿಗೆ ದೆಹಲಿ ಮಹಿಳಾ ಪೊಲೀಸರು ಭಾಗಿಯಾಗಲಿದ್ದಾರೆ. ಈ ತುಕಡಿಯಲ್ಲಿ ಸಂಪೂರ್ಣ ಮಹಿಳಾ ಪೊಲೀಸರು ಕರ್ತವ್ಯ ಪಥದಲ್ಲಿ ಹೆಜ್ಜೆ ಹಾಕಲಿದ್ದಾರೆ. ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ಥೀಮ್ ಅಡಿ 194 ಮಹಿಳಾ ಪೊಲೀಸರು ಪರೇಡ್ ಮಾಡಲಿದ್ದು, ಐಪಿಎಸ್ ಅಧಿಕಾರಿ ಶ್ವೇತಾ ಕೆ. ಸುಗತನ್ ಅವರು ಈ ಪಡೆಯನ್ನ ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
75ನೇ ಗಣರಾಜ್ಯೋತ್ಸವವೂ ರಾಷ್ಟ್ರಪತಿ ಹಾಗೂ ಅವರ ಅಂಗರಕ್ಷಕರಿಗೆ ಮಹತ್ವದ ದಿನವಾಗಿದೆ. 250 ವರ್ಷಗಳ ಸೇವೆ ಪೂರೈಸಿರುವ ‘ಅಂಗರಕ್ಷಕರು’ 1773ರಲ್ಲಿ ಆರಂಭವಾದ ರಾಷ್ಟ್ರಪತಿ ಅಂಗರಕ್ಷಕ ದಳ ಇದೇ ಮೊದಲ ಬಾರಿ ರಾಷ್ಟ್ರಧ್ವಜ ಹಿಡಿದು ಸಾಗಲಿದ್ದಾರೆ. ರಾಷ್ಟ್ರಪತಿ ಭವನದಿಂದ ರಾಷ್ಟ್ರಪತಿಯವರನ್ನು ಅಂಗರಕ್ಷಕರು ಕರೆತರಲಿರಲಿದ್ದಾರೆ. ದೇಶದಲ್ಲೇ ಅತ್ಯುತ್ತಮ ಅಶ್ವಾರೋಹಿಗಳು ಈ ಅಂಗರಕ್ಷಕರಾಗಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಪ್ರಮುಖ ದಿನವಾಗಿದೆ. 40 ವರ್ಷದ ಬಳಿಕ ರಾಷ್ಟ್ರಪತಿಗಳು ಸಮಾರಂಭಕ್ಕೆ ಸಾರೋಟಿನಲ್ಲಿ ಬರಲಿದ್ದಾರೆ. ಅವರು ಕರ್ತವ್ಯ ಪಥದಲ್ಲಿ ಸಾರೋಟಿನಲ್ಲಿ ಸಾಗಲಿದ್ದಾರೆ. ಮಾಮೂಲಿಯಾಗಿ ಗಣರಾಜ್ಯೋತ್ಸವಕ್ಕೆ ವಿಶೇಷ ಕಾರಿನಲ್ಲಿ ರಾಷ್ಟ್ರಪತಿ ಆಗಮಿಸ್ತಿದ್ದರು. ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ಫ್ರೆಂಚ್ ವಿದೇಶಿ ಪಡೆ ಭಾಗಿಯಾಗಲಿರುವುದು ಮತ್ತೊಂದು ವಿಶೇಷವಾಗಿದೆ.
ಕ್ಯಾಪ್ಟನ್ ಖೌರ್ಡಾ ನೇತೃತ್ವದಲ್ಲಿ ಫ್ರೆಂಚ್ ಸೇನಾ ಬ್ಯಾಂಡ್ ಭಾಗಿಯಾಗಲಿದೆ. 30 ಮಂದಿ ಸಂಗೀತಗಾರರಿಂದ ರೆಜಿಮೆಂಟ್ ಗೀತೆ ಗಾಯನ ನಡೆಯಲಿದೆ. ಫ್ರಾನ್ಸ್ ಸೇನೆಯ ‘2ನೇ ಇನ್ಫ್ಯಾಂಟ್ರಿ’ ತುಕಡಿ ಪಥಸಂಚಲನ ನಡೆಸಲಿದ್ದು, ಕ್ಯಾಪ್ಟನ್ ನೋಯೆಲ್ ನೇತೃತ್ವದಲ್ಲಿ 90 ಮಂದಿ ಯೋಧರು ಭಾಗಿಯಾಗಲಿದ್ದಾರೆ. ಕರ್ನಾಟಕ ಸೇರಿ ವಿವಿಧೆಡೆಯ ಜಾನಪದ ಕಲಾವಿದರು ಪರೇಡ್ನಲ್ಲಿ ಪ್ರದರ್ಶನ ನೀಡಲಿದ್ದಾರೆ.