ದೆಹಲಿ, ಜ 26 (DaijiworldNews/AA): ಇತ್ತೀಚಿನ ವರ್ಷಗಳಲ್ಲಿ ಯುಪಿಎಸ್ ಸಿ ಪರೀಕ್ಷೆಯ ತಯಾರಿಗಾಗಿ ಹಲವಾರು ತರಬೇತಿ ಕೇಂದ್ರಗಳು ಪ್ರಾರಂಭವಾಗಿವೆ. ಈ ತರಬೇತಿ ಕೇಂದ್ರಗಳಲ್ಲಿ ಅಭ್ಯರ್ಥಿಗಳು ತರಬೇತಿ ಪಡೆದು ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಐಎಎಸ್, ಐಪಿಎಸ್ ಮತ್ತು ಐಎಫ್ ಎಸ್ ಅಧಿಕಾರಿಗಳಾಗುತ್ತಾರೆ. ಆದರೆ ಕೆಲ ಅಭ್ಯರ್ಥಿಗಳು ತರಬೇತಿಯನ್ನು ಪಡೆಯದೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಅಂತಹವರಲ್ಲಿ ಐಎಎಸ್ ಅಧಿಕಾರಿ ಸರ್ಜನಾ ಯಾದವ್ ಕೂಡ ಒಬ್ಬರು.
ಮೂಲತಃ ದೆಹಲಿಯವರಾದ ಸರ್ಜನಾ ಯಾದವ್ ಅವರು ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ (DTU) ಬಿಟೆಕ್ ಪದವಿ ಪಡೆದಿದ್ದಾರೆ. ಅವರು ತನ್ನ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ ಬಳಿಕ TRAI ನಲ್ಲಿ ಸಂಶೋಧನಾ ಅಧಿಕಾರಿಯಾಗಿ ಕೆಲಸಕ್ಕೆ ಸೇರುತ್ತಾರೆ. ಸರ್ಜನಾ ಅವರು ಉದ್ಯೋಗದಲ್ಲಿ ಮಾಡುತ್ತಿದ್ದರೂ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾಗಬೇಕೆಂಬ ಬಯಕೆ ಅವರಲ್ಲಿ ಇತ್ತು.
ಸರ್ಜನಾ ಅವರು ಐಎಎಸ್ ಅಧಿಕಾರಿಯಾಗಬೇಕೆಂಬ ಉದ್ದೇಶದಿಂದ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಾರೆ. 2017 ರಲ್ಲಿ ಸರ್ಜನಾ ಅವರು ಮೊದಲ ಬಾರಿಗೆ ಯುಪಿಎಸ್ ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಆದರೆ ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ. ಇದರಿಂದ ಕುಗ್ಗದೆ ಸರ್ಜನಾ ಅವರು 2018ರಲ್ಲಿ ಎರಡನೇ ಬಾರಿಗೆ ಪರೀಕ್ಷೆ ಬರೆಯುತ್ತಾರೆ. ಆದರೆ ಈ ಬಾರಿಯೂ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗುವುದಿಲ್ಲ. ಯುಪಿಎಸ್ ಸಿ ಪರೀಕ್ಷೆಯ ತಯಾರಿಗಾಗಿ ಸರ್ಜನಾ ಅವರು ತನ್ನ ಸಮಯ ಹಾಗೂ ಶಕ್ತಿಯನ್ನು ಸಂಪೂರ್ಣವಾಗಿ ವಿನಿಯೋಗಿಸುವ ಉದ್ದೇಶದಿಂದ 2018ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡುತ್ತಾರೆ.
ನಂತರ ಸರ್ಜನಾ ಅವರು 2019 ರಲ್ಲಿ ಮೂರನೇ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ ಉತ್ತೀರ್ಣರಾಗುವ ಜೊತೆಗೆ 126ನೇ ಅಖಿಲ ಭಾರತ ರ್ಯಾಂಕ್ ಕೂಡ ಗಳಿಸುತ್ತಾರೆ. ಸರ್ಜನಾ ಅವರು ಯಾವುದೇ ತರಬೇತಿ ಪಡೆಯದೆ ಸ್ವಯಂ-ಅಧ್ಯಯನದ ಮೂಲಕವೂ ಯುಪಿಎಸ್ ಸಿ ಪರೀಕ್ಷೆಯನ್ನು ರ್ಯಾಂಕ್ ಪಡೆಯುವುದರೊಂದಿಗೆ ಉತ್ತೀರ್ಣರಾಗಬಹುದೆಂದು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಸರ್ಜನಾ ಅವರು ಇತರೆ ಯುಪಿಎಸ್ ಸಿ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.