ಬೆಂಗಳೂರು, ಜ 26 (DaijiworldNews/AA): 'ಬೆಂಗಳೂರು ನಗದಾಭಿವೃದ್ಧಿ' ಇಲಾಖೆಯು ನಗದು ಅಭಿವೃದ್ಧಿಗೆ ಸಿಕ್ಕಸಿಕ್ಕ ಕಡೆ ಸುಲಿಗೆಗೆ ಇಳಿದಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು 'ಬೆಂಗಳೂರು ನಗದಾಭಿವೃದಿ ಇಲಾಖೆ' ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ದಂಧೆಗೆ ಯಾವ ಹುಲ್ಲುಗಾವಲಾದರೇನು? ಹೈಕಮಾಂಡ್ ಗೆ ಕಪ್ಪ ಸಲ್ಲಿಸಬೇಕೆಂದು ಹಾದಿಬೀದಿಯಲ್ಲಿ ಹೇಳಿಕೊಂಡು ಸಿಕ್ಕಿದ ಕಡೆಯೆಲ್ಲಾ ವಸೂಲಿ ಮಾಡಲಾಗುತ್ತಿದೆ. ತೆಲಂಗಾಣ ಚುನಾವಣೆಗೆ ರಾಜ್ಯದಲ್ಲಿ ಹಣ ಸಂಗ್ರಹ ಮಾಡಿದಂತೆ, ಲೋಕಸಭೆ ಚುನಾವಣೆಗೂ ವಸೂಲಿ ಶುರುವಾಗಿದೆ. ಇದು ಕಲೆಕ್ಷನ್ ಸರ್ಕಾರ ಎಂದು ಆರೋಪಿಸಿದ್ದಾರೆ.
ಇನ್ನು ಕೈಗಾರಿಕೆ, ಉದ್ಯಮ ಚಟುವಟಿಕೆಗೆ ಒಪ್ಪಿಗೆ ಸೂಚಿಸಲು ಕೆಐಎಡಿಬಿ ಇದೆ. ಏಕಗವಾಕ್ಷಿ ವ್ಯವಸ್ಥೆ ಅಡಿಯಲ್ಲಿ ಪ್ರಕ್ರಿಯೆ ನಿರಾತಂಕವಾಗಿ ಸಾಗುತ್ತಿದೆ. ಅದಕ್ಕೂ ಮುನ್ನ ಉನ್ನತಮಟ್ಟದ ಹೂಡಿಕೆ ಅನುಮೋದನೆ ಸಮಿತಿ ಒಪ್ಪಿಗೆಯನ್ನು ಸಹ ನೀಡುತ್ತದೆ. ಇಷ್ಟೆಲ್ಲಾ ಇದ್ದ ಮೇಲೂ ಕೈಗಾರಿಕೆ ಇಲಾಖೆಯಲ್ಲಿ ಬಿಡಿಎಗೆ ಏನು ಕೆಲಸ? ಯಾಕೆ ಜೇಬು ಭರ್ತಿ ಮಾಡಲು ಬಿಡಿಎ ಇಂತಹ ಅಡ್ಡದಾರಿ ತುಳಿದಿದೆ? ಎಂದು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.