ನವದೆಹಲಿ, ಎ24(Daijiworld News/SS): ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ಕೆಲ ತಿಂಗಳಲ್ಲೇ ಬಿಜೆಪಿಗೆ ಗೌತಮ್ ಗಂಭೀರ್ ಸೇರ್ಪಡೆಯಾಗಿದ್ದರು. ಇದೀಗ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಪೂರ್ವ ದೆಹಲಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ನಾಮಪತ್ರ ಸಲ್ಲಿಸಿದ್ದರು.
ನಾಮಪತ್ರ ಸಲ್ಲಿಸುವ ವೇಳೆ ಗಂಭೀರ್ ತಮ್ಮ ಬಳಿ 147 ಕೋಟಿ ರೂ. ಬೆಲೆಬಾಳುವ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಈ ಮೂಲಕ ಅವರು ದೆಹಲಿಯಲ್ಲಿ ಸ್ಪರ್ಧಿಸುತ್ತಿರುವ 349 ಅಭ್ಯರ್ಥಿಗಳಲ್ಲೇ ಅತ್ಯಂತ ಶ್ರೀಮಂತ ಅಭ್ಯರ್ಥಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಗೌತಮ್ ಗಂಭೀರ್ 2017-18ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ನಲ್ಲಿ ವಾರ್ಷಿಕ 12.40 ಕೋಟಿ ರೂ. ಆದಾಯ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಅವರ ಪತ್ನಿ ನತಾಶಾ ಗಂಭೀರ್ ವಾರ್ಷಿಕ 6.15 ಲಕ್ಷ ರೂ. ಆದಾಯ ಹೊಂದಿದ್ದಾರೆ ಎನ್ನಲಾಗಿದೆ.
2011ರ ಏಕದಿನ ವಿಶ್ವಕಪ್ ಕ್ರಿಕೆಟ್ ಹೀರೋ ಡಿಸೆಂಬರ್ 2018ರಲ್ಲಿ ನಿವೃತ್ತರಾಗಿದ್ದರು. ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ ಕೆಲ ತಿಂಗಳಲ್ಲೇ ಬಿಜೆಪಿಗೆ ಗೌತಮ್ ಗಂಭೀರ್ ಸೇರ್ಪಡೆಯಾಗಿದ್ದರು. ಹೊಸದಿಲ್ಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅರುಣ್ ಜೇಟ್ಲಿ ಹಾಗೂ ರವಿಶಂಕರ್ ಪ್ರಸಾದ್ ಗೌತಮ್ ಗಂಭೀರ್ರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದರು. ಈ ವೇಳೆ ''ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಪ್ರೇರಣೆ ಪಡೆದು ರಾಜಕೀಯಕ್ಕೆ ಸೇರುವ ನಿರ್ಧಾರ ಮಾಡಿದ್ದು ಬಿಜೆಪಿಗೆ ಸೇರ್ಪೆಡೆಯಾಗಿದ್ದೇನೆ'' ಎಂದು ಪ್ರತಿಕ್ರಿಯೆ ನೀಡಿದ್ದರು.