ನವದೆಹಲಿ,ಏ 24 (Daijiworld News/MSP): ಉತ್ತರ ಪ್ರದೇಶದ ಮಾಜಿ ಸಿಎಂ ಎನ್ ಡಿ ತಿವಾರಿ ಮಗ ರೋಹಿತ್ ಶೇಖರ್ ಸಾವು ಸಹಜ ಸಾವಲ್ಲ ಇದೊಂದು ಪೂರ್ವನಿಯೋಜಿತ ಕೊಲೆ ಎಂಬ ಸಂಶಯ ವ್ಯಕ್ತವಾದ ಹಿನ್ನಲೆಯಲ್ಲಿ ರೋಹಿತ್ ಶೇಖರ್ ಅವರ ಪತ್ನಿ ಅಪೂರ್ವ ಶುಕ್ಲಾ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವಾರದ ಹಿಂದೆಯಷ್ಟೇ ಸಾವನ್ನಪ್ಪಿದ ತಿವಾರಿ ಅವರ ಪುತ್ರ ರೋಹಿತ್ ಶೇಖರ್ ಅವರು, 'ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ' ಎಂಬುದು ಮರಣೋತ್ತರ ಪರೀಕ್ಷೆಯಿಂದ ದೃಢವಾಗಿತ್ತು. ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯ ಐವರು ಹಿರಿಯ ವೈದ್ಯರು ರೋಹಿತ್ ಅವರ ಮರಣೋತ್ತರ ಪರೀಕ್ಷೆ ನಡೆಸಿ ವರದಿ ಸಲ್ಲಿಸಿದ್ದು, ಇದರಲ್ಲಿ ರೋಹಿತ್ ಅವರ ಉಸಿರುಗಟ್ಟಿಸಿ ಕೊಲೆ ಮಾಡಲಾಗಿರುವ ಸಾಧ್ಯತೆಯ ಬಗ್ಗೆ ಎಂದು ಉಲ್ಲೇಖಿಸಲಾಗಿತ್ತು.
ಅನುಮಾನ ಬಲವಾದ ಹಿನ್ನಲೆಯಲ್ಲಿ ದೆಹಲಿ ಅಪರಾಧ ವಿಭಾಗದ ಅಧಿಕಾರಿಗಳು ವಿಧಿವಿಜ್ಞಾನ ವರದಿಗೆ ಕಾಯುತ್ತಿದ್ದು, ಈ ನಡುವೆ ರೋಹಿತ್ ಅವರ ತಾಯಿ, ಅಪೂರ್ವ ಶುಕ್ಲಾ ಹಾಗೂ ನನ್ನ ಮಗನ ನಡುವಿನ ದಾಂಪತ್ಯ ಜೀವನ ಉತ್ತಮವಾಗಿರಲಿಲ್ಲ ಎಂದು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಗಂಡನ ಸಾವಿನ ಸಂಚು ಪತ್ನಿಯೇ ರೂಪಿಸಿರುವ ಸಾಧ್ಯತೆ ಇದ್ದು, ಮನೆಯ ಕೆಲಸಗಾರರಿಬ್ಬರ ಸಹಾಯ ಪಡೆದುಕೊಂಡು ಕೊಲೆ ಮಾಡಿರಬಹುದು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷಿಗಳು ನಮಗೆ ಇದುವರೆಗೂ ಪತ್ತೆಯಾಗಿಲ್ಲ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಅಪೂರ್ವ ಶುಕ್ಲಾ ಅವರನ್ನು ಪೊಲೀಸರು 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.
ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ವಾಸವಾಗಿರುವ ರೋಹಿತ್ ಶೇಖರ್ ಕಳೆದ ಮಂಗಳವಾರ ಅಸಹಜವಾಗಿ ಸಾವನ್ನಪ್ಪಿದ್ದರು. ಎನ್.ಡಿ ತಿವಾರಿ ಅವರೇ ತನ್ನ ತಂದೆ ಎಂಬುದನ್ನು ನಿರೂಪಿಸುವ ಸಲುವಾಗಿ ಕಳೆದ 6 ವರ್ಷಗಳಿಂದ ರೋಹಿತ್ ಅವರು ಕಾನೂನು ಸಮರ ಸಾರಿದ್ದರು. ಡಿಎನ್ಎ ಪರೀಕ್ಷೆಯಲ್ಲಿ ಶೇಖರ್, ತಿವಾರಿ ಅವರ ಅಕ್ರಮ ಸಂಬಂಧದಿಂದ ಜನಿಸಿದ ಮಗ ಎಂಬುದು ಸಾಬಿತಾಗಿತ್ತು. ಬಳಿಕ ಸ್ವತಃ ತಿವಾರಿ, ರೋಹಿತ್ರನ್ನು ತಮ್ಮ ಪುತ್ರ ಎಂದು ಒಪ್ಪಿಕೊಂಡಿದ್ದರು.