ಬೆಂಗಳೂರು,ಏ 24 (Daijiworld News/MSP): ಕಂಪ್ಲಿ ಶಾಸಕ ಜಿಎನ್ ಗಣೇಶ್ಗೆ ಕೊನೆಗೂ ಜಾಮೀನು ಮಂಜೂರಾಗಿದೆ. ಬಿಡದಿಯ ಈಗಲ್ಟನ್ ರೆಸಾರ್ಟ್ ನಲ್ಲಿ ವಿಜಯಪುರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಫೆ.21 ರಿಂದ ಜೈಲು ವಾಸದಲ್ಲಿದ್ದ ಕಂಪ್ಲಿ ಗಣೇಶ್ಗೆ ಹೈಕೋರ್ಟ್ ಏಕ ಸದಸ್ಯ ಪೀಠ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಸಾಕ್ಷ್ಯ ನಾಶ ಮಾಡದಂತೆ ಹಾಗೂ ಇಂತಹ ಮರುಕಳಿಸದಂತೆ ಎಚ್ಚರಿಕೆ ನೀಡಿರುವ ಹೈಕೋರ್ಟ್ ನ ಏಕ ಸದಸ್ಯ ಪೀಠ 2 ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಪಡೆದು ಜಾಮೀನು ಮಂಜೂರು ಮಾಡಲಾಗಿದೆ.
ಈಗಲ್ಟನ್ ರೆಸಾರ್ಟ್ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದ ಗಣೇಶ್ರನ್ನ ಫೆಬ್ರವರಿ 20 ರಂದು ಗುಜರಾತ್ ನ ಅಹಮದಾಬಾದ್ನಲ್ಲಿ ಬಂಧಿಸಲಾಗಿತ್ತು. ಈ ನಡುವೆ ಗಣೇಶ್ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕಾರವಾಗಿತ್ತು. ಈ ಹಿನ್ನಲೆಯಲ್ಲಿ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು.
ಗಣೇಶ್ ಪರ ಜಾಮೀನು ನೀಡುವಂತೆ ವಾದ ಮಂಡಿಸಿದ ವಕೀಲ ಬಿ.ವಿ.ಆಚಾರ್ಯ, ಈ ಘಟನೆ ಪೂರ್ವನಿಯೋಜಿತವಲ್ಲ. ಮೊದಲು ಆನಂದ್ ಸಿಂಗ್ ಅವರೇ ಹಲ್ಲೆ ನಡೆಸಿದ್ದರು ಇದಕ್ಕೆ ಪ್ರತಿಯಾಗಿ ಆತ್ಮರಕ್ಷಣೆಗಾಗಿ ಗಣೇಶ್ ಪ್ರತಿದಾಳಿ ನಡೆಸಿದ್ದಾರೆ. ಇನ್ನು ಘಟನೆಗೆ ಸಚಿವರು, ಶಾಸಕರೇ ಸಾಕ್ಷಿಗಳಾಗಿರುವ ಕಾರಣ ಅವರ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ ಈ ಆಧಾರದ ಮೇಲೆ ಕಂಪ್ಲಿ ಗಣೇಶ್ಗೆ ಜಾಮೀನು ನೀಡಬೇಕಾಗಿದೆ ಅಂತಾ ಬಿ.ವಿ.ಆಚಾರ್ಯ ಮನವಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ
ಆರೋಪಿ ಹೊರ ಬಂದರೆ ಆನಂದ್ ಸಿಂಗ್ ಜೀವ ಅಪಾಯವಿದೆ ಎಂದು ವಾದಿಸಿದ್ದರು. ವಾದ ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ್ದ ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.