ಭೂಪಾಲ್, ಜ 29 (DaijiworldNews/AK): ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಹಿರಿಯ ನಾಯಕರನ್ನು ಕಣಕ್ಕಿಳಿಸುವ ಆಲೋಚನೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ನಲ್ಲಿದೆ. ಆದರೆ ಇದೇ ಸಮಯದಲ್ಲಿ ಹಾಲಿ ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಅವರು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ನಾನು ರಾಜ್ಯಸಭಾ ಸದಸ್ಯನಾಗಿದ್ದೇನೆ. ಇನ್ನೂ ಎರಡು ವರ್ಷ ಅಧಿಕಾರವಧಿ ಉಳಿದಿದೆ. ರಾಜ್ಗಢ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷ ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ.
ದಿಗ್ವಿಜಯ ಸಿಂಗ್ 2019ರಲ್ಲಿ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಬಿಜೆಪಿಯ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ 3.65 ಲಕ್ಷ ಮತಗಳ ಅಂತರದಿಂದ ಸೋತಿದ್ದರು.
ದಿಗ್ವಿಜಯ ಸಿಂಗ್ 1984, 1991ರಲ್ಲಿ ರಾಜ್ಗಢ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದ ಒಟ್ಟು 29 ಸ್ಥಾನಗಳ ಪೈಕಿ ಬಿಜೆಪಿ 28 ಹಾಗೂ ಕಾಂಗ್ರೆಸ್ ಒಂದು ಸ್ಥಾನ ಗೆದ್ದಿದೆ.