ಮಂಡ್ಯ, ಜ 29 (DaijiworldNews/MS): " ಮಂಡ್ಯದಲ್ಲಿ ರಾಜಕೀಯ ನೆಲೆ ಇಲ್ಲದ ಬಿಜೆಪಿಯು ಅಸ್ಥಿತ್ವ ಕಂಡುಕೊಳ್ಳಲು ಜನರನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಟೀಕಿಸಿದ್ದಾರೆ.
ಮಂಡ್ಯದಲ್ಲಿ ಹನುಮಧ್ವಜ ವಿಚಾರವಾಗಿ ಎದ್ದಿರುವ ವಿವಾದದ ಕುರಿತು ಮಾಧ್ಯಮಗಳು ಸೋಮವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, “ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ. ದೇಶದ ಕಾನೂನಿಗೆ ನಾವು ಗೌರವ ನೀಡಬೇಕು. ಬಿಜೆಪಿ ಅಭ್ಯರ್ಥಿಗಳು ಅನೇಕ ಕಡೆಗಳಲ್ಲಿ ಠೇವಣಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಜತೆ ಸೇರಿಕೊಂಡಿದ್ದಾರೆ. ಮಂಡ್ಯದಲ್ಲಿ ರಾಜಕೀಯ ನೆಲೆ ಕಂದುಕೊಳ್ಳಲು ಇಂತಹ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದರಿಂದ ಏನೂ ಪ್ರಯೋಜನವಿಲ್ಲ. ಮಂಡ್ಯದ ಜನರು ಬಹಳ ಸಹಿಷ್ಣುತೆಯುಳ್ಳವರು, ಜಾತ್ಯಾತೀತರಾಗಿದ್ದಾರೆ. ಅವರು ಇಂತಹ ವಿಚಾರಗಳಿಗೆ ಮಾರುಹೋಗುವುದಿಲ್ಲ. ನಮಗೆ ನಮ್ಮದೇ ಆದ ಸಂವಿಧಾನವಿದೆ. ಈ ಭಾಗವನ್ನು ನಮ್ಮ ಮಹಾರಾಜರು ಹೇಗೆ ಆಳ್ವಿಕೆ ನಡೆಸಿದ್ದಾರೆ ಎಂಬ ಇತಿಹಾಸವಿದೆ. ಈ ಎಲ್ಲಾ ಗೊಂದಲಗಳು ಬಿಜೆಪಿಯ ಸೃಷ್ಟಿ. ರಾಜ್ಯದಲ್ಲಿ ಶಾಂತಿ ಸ್ಥಾಪನೆ ಮಾಡುವುದು ನಮ್ಮ ಆದ್ಯತೆ.”
ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ಎಂಬ ಬಿಜೆಪಿ ನಾಯಕರ ಟೀಕೆ ಬಗ್ಗೆ ಕೇಳಿದಾಗ, “ಯಾರು ಹಿಂದೂ ವಿರೋಧಿ? ನಾವೆಲ್ಲರೂ ಮೊದಲು ಭಾರತೀಯರು. ಅಲ್ಲಿ ದಲಿತ ಸಂಘರ್ಷ ಸಮಿತಿ, ಕೆಂಪೇಗೌಡ ಸಮಿತಿ ಸೇರಿದಂತೆ ಅನೇಕರು ನಾವು ಬಾವುಟ ಹಾಕುತ್ತೇವೆ ಎಂದು ಕೇಳುತ್ತಿದ್ದಾರೆ. ನಾವೆಲ್ಲರೂ ಹಿಂದೂಗಳಲ್ಲವೇ? ನಮ್ಮ ಹಳ್ಳಿಯಲ್ಲಿರುವ ಜನ ಹಿಂದೂಗಳಲ್ಲವೇ? ಸಮಾಜದಲ್ಲಿ ಅಶಾಂತಿ ಮೂಡಿಸಲು ಬಿಜೆಪಿ ಈ ಪ್ರಯತ್ನ ಮಾಡುತ್ತಿದೆ” ಎಂದು ತಿಳಿಸಿದರು.