ಬೆಳಗಾವಿ, ಜ 30(DaijiworldNews/AA): ಲಕ್ಷ್ಮಣ ಸವದಿ ಅವರು ಬಿಜೆಪಿ ಪಕ್ಷಕ್ಕೆ ಮರಳಿದರೆ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ ಎಂದು ಮಾಜಿ ಸಂಸದ ರಮೇಶ್ ಕತ್ತಿ ತಿಳಿಸಿದ್ದಾರೆ.
ಲಕ್ಷ್ಮಣ ಸವದಿ ಅವರು ಮರಳಿ ಬಿಜೆಪಿಗೆ ಸೇರುತ್ತಾರೆ ಎಂಬ ವಿಚಾರದ ಬಗ್ಗೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮಣ ಸವದಿ ಅವರು ಬಿಜೆಪಿಗೆ ಸೇರುವ ಬಗ್ಗೆ ಈಗಾಗಲೇ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಚರ್ಚೆ ಪ್ರಾರಂಭವಾಗಿದೆ. ನಮ್ಮನ್ನೂ ಸಹ ವರಿಷ್ಠರು ಕರೆದು ಚರ್ಚೆ ಮಾಡಿ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಸವದಿ ಅವರನ್ನು ಪಕ್ಷಕ್ಕೆ ಕರೆತರುವ ಚರ್ಚೆಯಲ್ಲಿ ನಾನೂ ಕೂಡ ಒಬ್ಬನಾಗಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಪಕ್ಷದಲ್ಲಿ ಸ್ಥಾನಮಾನ ನೀಡುವ ಬಗ್ಗೆ ಮಾತನಾಡಿದ ಅವರು, ಸ್ಥಾನಮಾನಕ್ಕಾಗಿ ಯಾರೂ ಬರುವುದಿಲ್ಲ. ಸವದಿ ಅವರು ಕಾಂಗ್ರೆಸ್ ಗೆ ಹೋದಾಗ ಏನು ಸ್ಥಾನ ಕೇಳಿ ಹೋಗಿದ್ದರು? ಅವರೇನು ಕೊಟ್ಟರೊ. ಬಿಜೆಪಿಗೆ ಮರಳಿ ಬಂದರೆ ಅವರಿಗೆ ಯಾವ ಸ್ಥಾನ ನೀಡಬೇಕೆಂದು ನಮ್ಮನ್ನು ಕರೆದು ತೀರ್ಮಾನ ಮಾಡುತ್ತಾರೆ. ರಾಷ್ಟ್ರೀಯ ಹಾಗೂ ರಾಜ್ಯ ವರಿಷ್ಠರು ಹೇಳಿದಂತೆ ಗೌರವಯುತವಾಗಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ ಎಂದರು.