ಬೆಂಗಳೂರು, ಜ 30(DaijiworldNews/AA): ಮಂಡ್ಯ ಕೆರಗೋಡು ಘಟನೆಗೆ ಸಂಬಂಧಪಟ್ಟಂತೆ ಕಾನೂನು ವಿರುದ್ಧ ಯಾರೇ ನಡೆದುಕೊಂಡರೂ ಅವರ ವಿರುದ್ಧ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದ್ದಾರೆ. ಈ ಮೂಲಕ ಕೆರೆಗೋಡಿನಲ್ಲಿ ಪೊಲೀಸರು ಮಾಡಿದ ಲಾಠಿ ಚಾರ್ಜ್ ಅನ್ನು ಅವರು ಸಮರ್ಥನೆ ಮಾಡಿಕೊಂಡಿದ್ದಾರೆ.
ಮಂಡ್ಯ ಕೆರಗೋಡು ಘಟನೆಗೆ ಸಂಬಂಧಪಟ್ಟಂತೆ ಕಾನೂನು ವಿರುದ್ಧ ಯಾರೇ ನಡೆದುಕೊಂಡರೂ ಅವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸುವ ಮೂಲಕ ಕೆರೆಗೋಡಿನಲ್ಲಿ ಪೊಲೀಸರು ಮಾಡಿದ ಲಾಠಿ ಚಾರ್ಜ್ ಅನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಕೆರಗೋಡು ಘಟನೆಗೆ ಪೊಲೀಸರು ತೆಗೆದುಕೊಂಡ ಕ್ರಮದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರಗೋಡಿನಲ್ಲಿ ರಾಷ್ಟ್ರಧ್ವಜ, ನಾಡ ಧ್ವಜ ಹಾರಿಸಲು ಅನುಮತಿ ಕೇಳಿದ್ದರು. ಪಂಚಾಯತ್ ನವರು ಅದಕ್ಕೆ ಅನುಮತಿ ನೀಡಿದ್ದಾರೆ. ಪಂಚಾಯತ್ ಅವರು ಕೆಲ ಶರತ್ತುಗಳನ್ನು ಹಾಕಿ ಅನುಮತಿ ನೀಡಿದ್ದರು. ಬೇರೆ ಧ್ವಜ ಹಾರಿಸಬಾರದೆಂದು ಪಂಚಾಯತ್ ಹೇಳಿ, ಮುಚ್ಚಳಿಕೆ ಬರೆಸಿಕೊಂಡು ಅನುಮತಿ ನೀಡಿದ್ದಾರೆ. ಮುಚ್ಚಳಿಕೆಯಲ್ಲಿ ಅವರು ರಾಷ್ಟ್ರ ಮತ್ತು ನಾಡ ಧ್ವಜ ಬಿಟ್ಟು ಬೇರೆ ಯಾವುದೇ ರಾಜಕೀಯ ಧ್ವಜ ಹಾಕೋದಿಲ್ಲ ಎಂದು ಬರೆದು ಕೊಟ್ಟಿದ್ದಾರೆ. ಧರ್ಮದ ಧ್ವಜ ಹಾಕೋದಿಲ್ಲ ಎಂದು ಅವರು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. ಆ ಬಳಿಕವೂ ಹನುಮಾನ್ ಧ್ವಜ ಹಾರಿಸಿದ್ದಾರೆ. ಇದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
ಹನುಮ ನಮಗೆಲ್ಲರಿಗೂ ಕೂಡ ದೇವರು. ಹನುಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡೋದು, ನಡೆದುಕೊಳ್ಳೋದಿಲ್ಲ. ಅವರಿಗೆ ಹೇಗೆ ಹನುಮ ದೇವರೋ ನಮಗೂ ಸಹ ದೇವರೇ. ಆದರೆ ಈ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ. ಎಲ್ಲರೂ ಕಾನೂನನ್ನು ಪಾಲಿಸಬೇಕು. ಸರ್ಕಾರಿ ಜಾಗದಲ್ಲಿ ಧಾರ್ಮಿಕ ಧ್ವಜ ಹಾರಿಸಿದರೆ ಹೇಗೆ? ಬೇರೆಯವರು ಕೂಡಾ ಅಂಬೇಡ್ಕರ್ ಧ್ವಜ ಬೇರೆ ಬೇರೆ ಧ್ವಜ ಹಾರಿಸುತ್ತೇವೆ ಎಂದು ಮನವಿ ಮಾಡಿಕೊಂಡಿದ್ದಾರೆ. ಸರ್ಕಾರವಾಗಿ ನಾವೇನು ಮಾಡಬಹುದು? ಶಾಂತಿ ಕಾಪಾಡಿ ಎಂದು ಹೇಳಬಹುದು ಎಂದು ಅವರು ಹೇಳಿದ್ದಾರೆ.
ನಿಮ್ಮ ಜಾಗದಲ್ಲಿ ಹನುಮ ಧ್ವಜ ಹಾರಿಸೋಕೆ ಯಾರು ತಡೆಯಲ್ಲ. ದೇವಸ್ಥಾನ, ನಿಮ್ಮ ಮನೆ ಹತ್ತಿರ ಧ್ವಜ ಹಾರಿಸೋಕೆ ಯಾರು ತಡೆಯುವುದಿಲ್ಲ ಆದರೆ ಸಾರ್ವಜನಿಕ ಸ್ಥಳ, ಸರ್ಕಾರಿ ಜಾಗದಲ್ಲಿ ಹಾರಿಸಿದ್ದು ತಪ್ಪು. ಇವರೇ ತಪ್ಪು ಮಾಡಿ ಇವರೇ ಸರ್ಕಾರವನ್ನು ದೂಷಿಸೋದು, ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದು ತಪ್ಪು. ಆದ್ದರಿಂದ ಕಾನೂನಿನ ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಮಾಡುತ್ತೇವೆ ಎಂದು ತಿಳಿಸಿದ್ದಾರೆ.