ತಿರುವನಂತಪುರಂ , ಜ 30 (DaijiworldNews/MS): ರಾಷ್ಟ್ರೀಯ ಸ್ವಯಂ ಸೇವಕ (ಆರ್ ಎಸ್ ಎಸ್) ಸಂಘದ ಕಾರ್ಯಕರ್ತ, ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣದಲ್ಲಿ 15 ಪಿಎಫ್ಐ ಕಾರ್ಯಕರ್ತರಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. ಕೇರಳದ ಇತಿಹಾಸದಲ್ಲೇ 15 ಆರೋಪಿಗಳಿಗೆ ಒಟ್ಟಿಗೆ ಮರಣದಂಡನೆ ವಿಧಿಸಿರುವುದು ಇದೇ ಮೊದಲು.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಗಮನಿಸಿದರೂ, ಇದು ಅತಿ ಹೆಚ್ಚು ದೋಷಿಗಳಿಗೆ ಗಲ್ಲು ಶಿಕ್ಷೆ ಹೊಂದಿರುವ ನಾಲ್ಕನೇ ಪ್ರಕರಣವಾಗಿದೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ (26 ಮಂದಿ), 2008 ರ ಅಹಮದಾಬಾದ್ ಸ್ಫೋಟ (38 ಮಂದಿ) ಮತ್ತು 2010 ರ ಬಿಹಾರ ದಲಿತ ಹತ್ಯಾಕಾಂಡ (16 ಮಂದಿ) ಹೆಚ್ಚು ಅಪರಾಧಿಗಳಿಗೆ ಶಿಕ್ಷೆಯಾಗಿತ್ತು.
ಕೇರಳದ ಮಾವೇಲಿಕರ ಅಡಿಷನಲ್ ಸೆಷನ್ಸ್ ನ್ಯಾಯಾಲಯ ನ್ಯಾಯಧೀಶೆ ವಿಜಿ ಶ್ರೀದೇವಿ ದೋಷಿಗಳಿಗೆ ಶಿಕ್ಷೆ ವಿಧಿಸಿ ಈ ತೀರ್ಪು ಪ್ರಕಟಿಸಿದ್ದಾರೆ.
ಡಿಸೆಂಬರ್ 19, 2021 ರಂದು ರಂಜಿತ್ ಶ್ರೀನಿವಾಸನ್ ಅವರು ವಾಸವಾಗಿದ್ದ ಆಲೆಪ್ಪಿಯ ಮನೆಗೆ ಪ್ರವೇಶಿಸಿದ ಪಿಎಫ್ ಐ ಮತ್ತು ಎಸ್ ಡಿಪಿಐ ಕಾರ್ಯಕರ್ತರಾಗಿದ್ದ ಅರೋಪಿಗಳು ಕುಟುಂಬ ಸದಸ್ಯರ ಎದುರೇ ಅವರನ್ನು ಕೊಚ್ಚಿ ಕೊಲೆ ಮಾಡಿದ್ದರು.
ಆರೋಪಿಗೆ ಗರಿಷ್ಠ ಶಿಕ್ಷೆ ಸಿಕ್ಕಿದ್ದು ಸಮಾಧಾನ ತಂದಿದೆ ಎಂದು ರಂಜಿತ್ ಪತ್ನಿ ಹಾಗೂ ಅವರ ತಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.