ಬೆಂಗಳೂರು, ಜ 30 (DaijiworldNews/HR): ಕಾಂಗ್ರೆಸ್ ನಾಯಕರ ಹೃದಯವನ್ನು ಸೋಪು ಹಾಕಿ ತೊಳೆದರೂ ಅಲ್ಲಿ ಶ್ರೀ ರಾಮ ಬರುವುದಿಲ್ಲ. ಅಲ್ಲಿ ಟಿಪ್ಪು ಸುಲ್ತಾನನೇ ಇರುತ್ತಾನೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರಿಗೆ ನೆಹರು ಕಾಲದಿಂದಲೂ ರಾಮನ ಮೇಲೆ ದ್ವೇಷ ಇದೆ. ಆದರೆ ಈಗ ಹನುಮನ ಬಗ್ಗೆ ದ್ವೇಷ ಶುರುವಾಗಿದೆ ಎಂದರು.
ಇನ್ನು ಮಂಡ್ಯದ ಕೆರೆಗೋಡಿನಲ್ಲಿ ಹನುಮ ಧ್ವಜ ಹಾರಿಸುವವರೆಗೂ ಬಿಜೆಪಿ ಹೋರಾಟ ನಡೆಸಲಿದ್ದು, ಕಾಂಗ್ರೆಸ್ ಸರ್ಕಾರ ಇನ್ನಷ್ಟು ಕೆದಕಿದರೆ ಇದು ದೇಶವ್ಯಾಪಿ ಹೋರಾಟವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೆರೆಗೋಡಿನಲ್ಲಿ 20-30 ವರ್ಷಗಳಿಂದ ಹನುಮ ಧ್ವಜ ಹಾರಿಸಲಾಗುತ್ತಿದ್ದು, ಯಾವುದೇ ಮಸೀದಿಯ ಬಳಿ ಧ್ವಜ ಹಾರಿಸಿಲ್ಲ. ಪ್ರತಿ ಮನೆಯವರಿಂದ ದೇಣಿಗೆ ಸಂಗ್ರಹಿಸಿ 6 ಲಕ್ಷ ರೂ. ಖರ್ಚು ಮಾಡಿ 108 ಅಡಿ ಸ್ತಂಭ ನಿರ್ಮಿಸಲಾಗಿದೆ. ಇಡೀ ವರ್ಷ ಅಲ್ಲಿ ಹನುಮ ಧ್ವಜ ಹಾರಿಸಲಾಗುತ್ತದೆ. ಆದರೆ ಹನುಮನ ನಾಡಿನಲ್ಲಿ ಹನುಮ ಧ್ವಜ ಹಾರಿಸಲು ಸರ್ಕಾರ ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.