ಒಡಿಶಾ, ಫೆ 01 (DaijiworldNews/AA):ಪ್ರತಿ ವರ್ಷ ಯುಪಿಎಸ್ ಸಿ ಪರೀಕ್ಷೆ ಬರೆಯುವ ಅದೆಷ್ಟೋ ವಿದ್ಯಾರ್ಥಿಗಳು ಹಲವಾರು ಪ್ರಯತ್ನಗಳ ಬಳಿಕ ಉತ್ತೀರ್ಣರಾಗುವವರಿದ್ದಾರೆ. ಇನ್ನು ಕೆಲವರು ಹಲವು ಪ್ರಯತ್ನದ ಬಳಿಕ ಉತ್ತೀರ್ಣರಾಗುವವರಿದ್ದಾರೆ. ಆದರೆ ಯಾವುದೇ ತರಬೇತಿ ಪಡೆಯದೆ ತಮ್ಮ ಮೊದಲ ಪ್ರಯತ್ನದಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಐಎಎಸ್ ಅಧಿಕಾರಿ ಸಿಮಿ ಕರಣ್ ಅವರ ಯಶೋಗಾಥೆ ಇದು.
ಮೂಲತಃ ಒಡಿಶಾ ರಾಜ್ಯದವರಾದ ಸಿಮಿ ಕರಣ್ ಅವರು ತಮ್ಮ ಶಾಲಾ ಶಿಕ್ಷಣವನ್ನು ಛತ್ತೀಸ್ ಘಡದ ಬಿಲೈನಲ್ಲಿ ಪೂರ್ಣಗೊಳಿಸುತ್ತಾರೆ. ಅವರ ತಂದೆ ಛತ್ತೀಸ್ ಘಡದ ಬಿಲೈನಲ್ಲಿನ ಸ್ಟೀಲ್ ಫ್ಯಾಕ್ಟರಿಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು ಹಾಗೂ ಅವರ ತಾಯಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿದವರು.
ಸಿಮಿ ಅವರು ಪಿಯುಸಿ ಮುಗಿಸಿದ ಬಳಿಕ ಐಐಟಿ ಬಾಂಬೆಯಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುತ್ತಾರೆ. ಈ ಸಂದರ್ಭ ಅವರು ಮುಂಬೈನ ಕೊಳೆಗೇರಿಗಳಲ್ಲಿ ವಾಸಿಸುವ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ದಿನೇ ದಿನೇ ಮಕ್ಕಳ ಕಷ್ಟಗಳನ್ನು ಕಂಡು ನೊಂದ ಅವರು, ಮಕ್ಕಳಿಗೆ ಸಹಾಯ ಮಾಡಬೇಕೆಂದು ನಿರ್ಧರಿಸುತ್ತಾರೆ. ಇದಾದ ಬಳಿಕ ಸಿಮಿ ಅವರು ಯುಪಿಎಸ್ ಸಿ ಪರೀಕ್ಷೆ ಬರೆಯಲು ನಿರ್ಧಾರ ಮಾಡುತ್ತಾರೆ.
ಬಳಿಕ ಸಿಮಿ ಅವರು ಹಲವು ಯುಪಿಎಸ್ ಸಿ ಟಾಪರ್ಸ್ ಗಳ ಸಂದರ್ಶನವನ್ನು ನೋಡಿ ಅಧ್ಯಯನ ಕ್ರಮವನ್ನು ಅರಿತು ಪರೀಕ್ಷೆಗೆ ತಯಾರಿ ನಡೆಸಲು ಪ್ರಾರಂಭಿಸುತ್ತಾರೆ. ಜೊತೆಗೆ ಇಂಟರ್ ನೆಟ್ ನಲ್ಲಿ ಸಿಗುವ ಮಾಹಿತಿಗಳಿಂದಲೂ ಸ್ವಯಂ ಅಧ್ಯಯನ ನಡೆಸುತ್ತಾರೆ. 2019 ರಲ್ಲಿ ಯುಪಿಎಸ್ ಸಿ ಪರೀಕ್ಷೆ ಬರೆದ ಅವರು ತಮ್ಮ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುತ್ತಾರೆ. ಜೊತೆಗೆ 31ನೇ ಅಖಿಲ ಭಾರತ ರ್ಯಾಂಕ್ ಕೂಡ ಗಳಿಸುತ್ತಾರೆ. ಇದರೊಂದಿಗೆ ತಮ್ಮ 22 ನೇ ವಯಸ್ಸಿಗೆ ಐಎಎಸ್ ಅಧಿಕಾರಿಯಾಗುತ್ತಾರೆ.
ಪ್ರಸ್ತುತ ಅಸ್ಸಾಂ-ಮೇಘಾಲಯ ಕೇಡರ್ ನಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಹಲವಾರು ಐಎಎಸ್ ಅಭ್ಯರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ.