ಕಾಶಿ, ಫೆ 01 (DaijiworldNews/MS): ಜ್ಞಾನವಾಪಿ ಕಟ್ಟಡ ನೆಲಮಾಳಿಗೆಯಲ್ಲಿರುವ ವಿಗ್ರಹಗಳ ಮುಂದೆ ಅರ್ಚಕರು ಪೂಜೆ ಸಲ್ಲಿಸಬಹುದು ಎಂದು ವಾರಣಾಸಿ ಜಿಲ್ಲಾ ನ್ಯಾಯಾಲಯ ಬುಧವಾರ ತೀರ್ಪು ನೀಡಿದ್ದು ಇದಾದ ಬಳಿಕ ಜ್ಞಾನವಾಪಿ ಆವರಣದಲ್ಲಿ ಮಧ್ಯರಾತ್ರಿಯಲ್ಲಿ ಧಾರ್ಮಿಕ ಸಮಾರಂಭಗಳನ್ನು ನಡೆಸಲಾಯಿತು. ಮುಂಜಾನೆ 3 ಗಂಟೆ ಸುಮಾರಿಗೆ ಅರ್ಚಕರು ಪೂಜೆ ನಡೆಸಿ, ನಂತರ ಶಯನ ಆರತಿ ಮಾಡಿದ್ದಾರೆ.
ಪೂಜೆ ಪ್ರಾರಂಭವಾಗುವ ಮೊದಲು, ವಾರಣಾಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಸ್ ರಾಜಲಿಂಗಂ ಮತ್ತು ಪೊಲೀಸ್ ಕಮಿಷನರ್ ಅಶೋಕ್ ಮುತಾ ಜೈನ್ ಅವರು ಮಧ್ಯರಾತ್ರಿಯ ಸುಮಾರಿಗೆ ಸಭೆ ನಡೆಸಿದರು. ಕಾಶಿ ವಿಶ್ವನಾಥ ಧಾಮದ ಆವರಣದಲ್ಲಿರುವ ಸಭಾಂಗಣದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸಭೆ ಕರೆಯಲಾಯಿತು. ಸಭೆಯ ಬಳಿಕ, ನ್ಯಾಯಾಲಯದ ತೀರ್ಪಿನ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಜಿಲ್ಲಾಡಳಿತವು ಕ್ರಮ ಕೈಗೊಂಡಿತು.
ದಕ್ಷಿಣ ನೆಲಮಾಳಿಗೆಗೆ ಸುಗಮ ಪ್ರವೇಶವನ್ನು ಅನುಮತಿಸಲು ಬ್ಯಾರಿಕೇಡ್ಗಳೊಳಗೆ ಒಂದು ಮಾರ್ಗವನ್ನು ತೆರವುಗೊಳಿಸಲಾಯಿತು, ದಕ್ಷಿಣದ ನೆಲಮಾಳಿಗೆಯಲ್ಲಿ ಪೂಜಾ ವಿಧಿವಿಧಾನಗಳನ್ನು ಅಡೆತಡೆಯಿಲ್ಲದೆ ಆಚರಿಸುವುದಕ್ಕೆ ಯಾವುದೇ ತೊಂದರೆಗಳಾಗದಂತೆ ಕ್ರಮ ಕೈಗೊಳ್ಳಲಾಯಿತು.
ಈ ಎಲ್ಲಾ ಬೆಳವಣಿಗೆಯನ್ನು ಸುಪ್ರೀಂ ಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್ ಅವರು ಎಕ್ಸ್ನಲ್ಲಿ ದೃಢಪಡಿಸಿದ್ದಾರೆ “ನ್ಯಾಯಾಲಯದ ಆದೇಶಗಳನ್ನು ಪಾಲಿಸಲಾಗಿದೆ. ಜ್ಞಾನವಾಪಿ ಆವರಣದ ಸರ್ವೆ ವೇಳೆ ದೊರೆತ ಮೂರ್ತಿಗಳನ್ನು ಇಟ್ಟು ಪ್ರಾರ್ಥನೆ ಸಲ್ಲಿಸಿ, ಬಳಿಕ ಅರ್ಚಕರು ವಿಗ್ರಹಗಳಿಗೆ ಶಯನ ಆರತಿ ಮಾಡಲಾಗಿದೆ. ಮುಂಭಾಗದಲ್ಲಿ ಅಖಂಡ ಜ್ಯೋತಿ ಇರಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
ಗುರುವಾರದಿಂದ, ಜ್ಞಾನವಾಪಿ ಸಂಕೀರ್ಣದಲ್ಲಿ ಯಥಾ ಪ್ರಕಾರ ಪೂಜೆ, ಮಂಗಳಾರತಿ ನಡೆಯಲಿದೆ ಎಂದು ಹೇಳಲಾಗಿದೆ.