ಮುಂಬೈ,ಏ24(Daijiworld News/AZM): ನನ್ನನ್ನು ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಎಂದು ಘೋಷಿಸಿರುವುದು ನನ್ನ ಪಾಲಿಗೆ ಆರ್ಥಿಕ ಮರಣದಂಡನೆಯಾಗಿದೆ ಎಂದು ಬಾಂಬೆ ಹೈಕೋರ್ಟ್ ಮುಂದೆ ವಿಜಯ್ ಮಲ್ಯ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ವಿಶೇಷ ನ್ಯಾಯಾಲಯವು ತನ್ನನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಿದೆ. ಹಾಗೂ ತನ್ನ ಎಲ್ಲಾ ಆಸ್ತಿಗಳನ್ನ ಮುಟ್ಟುಗೋಲು ಹಾಕಿದೆ. ಇದು ತನ್ನ ಪಾಲಿಗೆ ಆರ್ಥಿಕ ಮರಣ ದಂಡನೆಯಾದಂತಾಗಿದೆ ಎಂದು ಮಲ್ಯ ಹೇಳಿದ್ದಾರೆ.
“ನನ್ನ ಸಾಲಗಳು ಹಾಗೂ ಅದರ ಮೇಲಿನ ಬಡ್ಡಿ ಮೊತ್ತವು ಹೆಚ್ಚಾಗುತ್ತಿವೆ. ಈ ಸಾಲಗಳನ್ನ ತೀರಿಸುವಷ್ಟು ಆಸ್ತಿಗಳು ನನ್ನಲ್ಲಿವೆ. ಆದರೆ, ಈ ಆಸ್ತಿ ಬಳಸಿ ಸಾಲ ತೀರಿಸಲು ಸರಕಾರ ಅವಕಾಶ ನೀಡುತ್ತಿಲ್ಲ. ನನ್ನ ಆಸ್ತಿಗಳ ಮೇಲೆ ನನಗೇ ಅಧಿಕಾರ ಇಲ್ಲದಂತಾಗಿದೆ. ಇದು ನನಗೆ ಆರ್ಥಿಕ ಮರಣ ದಂಡನೆ ನೀಡಿದಂತಾಗಿದೆ” ಎಂದು ಮಲ್ಯ ಪರ ವಕೀಲ ಅಮಿತ್ ದೇಸಾಯಿ ಅವರು ಹೈಕೋರ್ಟ್ ಪೀಠಕ್ಕೆ ತಿಳಿಸಿದರು.