ನವದೆಹಲಿ, ಫೆ 01(DaijiworldNews/SK): ಪ್ರಧಾನಿ ಮೋದಿ ಸರ್ಕಾರ ಎರಡನೇ ಅವಧಿಯ ಕೊನೆಯ ಬಜೆಟ್ ಗೆ ಪರ- ವಿರೋಧ ವ್ಯಕ್ತವಾಗುತ್ತಿದ್ದು, ಬಜೆಟ್ನಲ್ಲಿ ಏನೂ ಇಲ್ಲ. ನಾಮಫಲಕ ಮಾತ್ರ ಬದಲಾಯಿಸಲಾಗಿದೆ. ಪ್ರಧಾನಿ ಮೋದಿ ಹೀಗೆ ಮಾಡಿದ್ರೆ ಪ್ರತ್ಯೇಕ ರಾಷ್ಟ್ರದ ಕೂಗು ಅನಿವಾರ್ಯ ಎಂದು ಸಂಸದ ಡಿ.ಕೆ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂತನ ಸಂಸತ್ ನಲ್ಲಿ ಮಂಡನೆಯಾದ ಚೊಚ್ಚಲ ಬಜೆಟ್ ನ ಬಗ್ಗೆ ಮಾತನಾಡಿದ ಡಿ.ಕೆ ಸುರೇಶ್ ಅವರು, ಕೇಂದ್ರ ಸರ್ಕಾರದ ಈ ಬಜೆಟ್ ನಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟ ಒಂದಷ್ಟು ಅಂಶಗಳನ್ನು ಘೋಷಿಸಿರುವುದು ಬಿಟ್ಟು ಬೇರ ಏನೂ ಬದಲಾಗಿಲ್ಲ. ಇದೀಗ ದಕ್ಷಿಣ ಭಾರತದ ಹಣವನ್ನು ಉತ್ತರ ಭಾರತಕ್ಕೆ ನೀಡಲು ಮುಂದಾಗಿದ್ದಾರೆ. ಇದರಿಂದ ನಮಗೆ ಆರ್ಥಿಕ ತೊಂದರೆಯಾಗುತ್ತಿದೆ. ಹೀಗೆ ಮುಂದುವರೆದರೆ ದಕ್ಷಿಣ ಭಾರತದ ಕೂಗು ಎತ್ತಬೇಕಾದ ಅನಿವಾರ್ಯತೆ ಬರಲಿದೆ ಎಂದರು.
ಇನ್ನು ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ವಿರೋಧ ಮಾಡಿದಂತವರು ಗ್ಯಾರಂಟಿ ಹೆಸರಿನಲ್ಲಿ ಚುನಾವಣೆಗೆ ಹೊರಟಿದ್ದಾರೆ. ಆರ್ಥಿಕ ಸಮೀಕ್ಷೆ ಬಿಡುಗಡೆ ಮಾಡಿದರೆ ಬಿಜೆಪಿ ಸರ್ಕಾರದ ಪರಿಸ್ಥಿತಿ ಏನಿದೆ ಅನ್ನೋದು ಗೊತ್ತಾಗುತ್ತಿತ್ತು. ಕಳೆದ ಸಾಲಿನಲ್ಲಿ ಯಾವ ರೀತಿ ದೇಶ ಸಾಧನೆ ಮಾಡಿದೆ ಅನ್ನುವ ಅನುಮಾನಗಳು ಈಗ ಆರಂಭವಾಗಿದೆ ಎಂದು ಕಿಡಿಕಾರಿದ್ದಾರೆ.