ಬೆಂಗಳೂರು, ಫೆ 01 (DaijiworldNews/HR): ಇಂದು ಮಂಡಿಸಿರುವ ಬಜೆಟ್ ಅರ್ಥಪೂರ್ಣವಾಗಿದೆ. ಇದಕ್ಕಾಗಿ ಮೋದಿ ಮತ್ತು ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮೀನುಗಾರರಿಗೆ ಕೇಂದ್ರದ ಬಜೆಟ್ ಅನುಕೂಲಕರವಾಗಿದೆ, 7 ಲಕ್ಷ ಆದಾಯ ಇರುವವರಿಗೆ ಆದಾಯ ಮಿತಿ ಮುಂದುವರೆಸಿರುವುದು ಉಪಯುಕ್ತವಾಗಿದೆ. ಬಡ ಜನರಿಗೆ ಮನೆ ನಿರ್ಮಾಣದ ಘೋಷಣೆ ಮಾಡಿರುವುದು ಅನುಕೂಲ. ರೈತರನ್ನು, ಬಡವರನ್ನು, ಕಾರ್ಮಿಕರನ್ನು ಕೇಂದ್ರವಾಗಿಸಿಕೊಂಡು ಬಜೆಟ್ ಮಂಡಿಸಲಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.
11.8 ಕೋಟಿ ರೈತರಿಗೆ ನೇರ ಹಣ ನೀಡಲಾಗಿದೆ. ಬಿಜೆಪಿ ರಾಜ್ಯ ಮತ್ತು ಕೇಂದ್ರದಲ್ಲಿ ಶಕ್ತಿಯುತವಾಗಿದೆ. ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಹಾಗೂ ರಾಜ್ಯ ನಾಯಕರ ನೇತೃತ್ವದಲ್ಲಿ ರಾಜ್ಯದ 28ಕ್ಕೆ 28 ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ. ನಮ್ಮದು ಒಗ್ಗಟ್ಟಾಗಿ ಹೋಗುವ ಮನೋಭಾವ ಇರುವ ನಾಯಕರುಗಳ ಪಕ್ಷ ಹಾಗಾಗಿ ನಾವು ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂದು ತಿಳಿಸಿದರು.