ಬೆಂಗಳೂರು, ಫೆ 02 (DaijiworldNews/AA): ನಮ್ಮ ಭವ್ಯ ಭಾರತವನ್ನು ಯಾರೂ ಒಡೆಯುವ ಮಾತು ಆಡಬಾರದು. ದೇಶ ಒಡೆಯೋ ಮಾತಾಡೋದು ಸರಿಯಲ್ಲ ಎಂದು ಸಂಸದ ಡಿಕೆ ಸುರೇಶ್ ಹೇಳಿಕೆಗೆ ಗೃಹ ಸಚಿವ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಡಿ.ಕೆ. ಸುರೇಶ್ ಅವರ ಪ್ರತ್ಯೇಕ ರಾಷ್ಟ್ರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆ ಸುರೇಶ್ ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆಂದು ತಿಳಿದಿಲ್ಲ. ನಮ್ಮ ದೇಶವನ್ನು ಒಗ್ಗೂಡಿಸಲು ಸಾವಿರಾರು ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ. ನೂರಾರು ವರ್ಷಗಳ ಕಾರ ಹೋರಾಟ ನಡೆದಿದೆ. ಗಾಂಧೀಜಿಯಂತ ಅನೇಕ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕೆ ಸ್ವಾತಂತ್ರ್ಯ ತರಲು, ದೇಶ ಒಗ್ಗೂಡಿಸಲು ಹೋರಾಟ ನಡೆಸಿದ್ದಾರೆ. ಈ ಹೋರಾಟದಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಯಾರೇ ಆಗಲಿ ದೇಶ ಒಗ್ಗೂಡಿಸುವ ಮಾತಾಡಬೇಕು. ಬದಲಾಗಿ ದೇಶ ಒಡೆಯುವ ಮಾತನಾಡಬಾರದು ಎಂದು ತಿಳಿಸಿದರು.
ನಮ್ಮ ಭಾರತ ಭವ್ಯವಾದ ಭಾರತ. ನಮ್ಮ ದೇಶದಿಂದ ಪಾಕಿಸ್ತಾನ ವಿಭಜನೆಯಾದಾಗ ನಾವ್ಯಾರೂ ಹುಟ್ಟಿರಲಿಲ್ಲ. ಆದರೆ ಅದರ ಇತಿಹಾಸ ನಮಗೆ ತಿಳಿದಿದೆ. ನಮ್ಮ ದೇಶ ಒಂದು ರಾಷ್ಟ್ರ ಒಂದು ದೇಶವೆಂದೇ ಇರಬೇಕು ಎಂದು ಅವರು ಹೇಳಿದರು.