ನವದೆಹಲಿ, ಫೆ 02 (DaijiworldNews/AA): ಮದ್ಯ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದಿಂದ 5ನೇ ಬಾರಿಗೆ ಸಮನ್ಸ್ ಪಡೆದಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಂದು ಕೂಡ ವಿಚಾರಣೆಗೆ ಗೈರಾಗಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರು ಜನವರಿ 19 ರಂದು ವಿಚಾರಣೆಗೆ ಹಾಜರಾಗಿರುವುದಿಲ್ಲ. ಇಡಿ ನೀಡಿದ ಸಮನ್ಸ್ ಕಾನೂನುಬಾಹಿರವಾಗಿದ್ದು, ಸಿಎಂ ಕೇಜ್ರಿವಾಲ್ ಅವರನ್ನು ಬಂಧಿಸುವುದು ಅವರ ಏಕೈಕ ಗುರಿ ಆಗಿದೆ ಎಂದು ಎಎಪಿ ಆರೋಪಿಸಿದೆ. ಎಎಪಿ ಮುಖ್ಯಸ್ಥರಾದ ಕೇಜ್ರಿವಾಲ್ ನವೆಂಬರ್ 2, ಡಿಸೆಂಬರ್ 21, ಜನವರಿ 3 ರಂದು ನೀಡಿರುವ ಸಮನ್ಸ್ ಗಳಲ್ಲಿ ತನಿಖಾ ಸಂಸ್ಥೆಯ ಮುಂದೆ ವಿಚಾರಣೆಗೆ ಹಾಜರಾಗಲು ನಿರಾಕರಿಸಿದ್ದರು.
ಕೇಜ್ರಿವಾಲ್ ಅವರಿಗೆ ನೀಡಿರುವ ಸಮನ್ಸ್ ರಾಜಕೀಯ ಪ್ರೇರಿತ ಹಾಗೂ ಕಾನೂನುಬಾಹಿರವಾಗಿದೆ. ಕೇಜ್ರಿವಾಲ್ ಅವರನ್ನು ಬಂಧಿಸುವ ಮೂಲಕ ದೆಹಲಿ ಸರ್ಕಾರವನ್ನು ಬೀಳಿಸುವುದು ಪ್ರಧಾನಿ ಮೋದಿ ಅವರ ಗುರಿ. ಇದನ್ನು ನಾವು ಸಾಧಿಸಲು ಬಿಡುವುದಿಲ್ಲ ಎಂದು ಕೇಜ್ರಿವಾಲ್ ಅವರಿಗೆ ಇಡಿ ಸಮನ್ಸ್ ನೀಡಿರುವ ಬಗ್ಗೆ ಎಎಪಿ ಆಕ್ರೋಶ ವ್ಯಕ್ತಪಡಿಸಿತ್ತು.