ರಾಮನಗರ,ಫೆ 02 (DaijiworldNews/ AK): ಕಲ್ಲು ಹೊಡೆದುಕೊಂಡು ಇದ್ದವರನ್ನ ಲೋಕಸಭೆಗೆ ಕಳುಹಿಸಿದರೆ ಇನ್ನೇನಾಗುತ್ತೆ ಎಂದು ಸಂಸದ ಡಿ.ಕೆ.ಸುರೇಶ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಪ್ರತ್ಯೇಕ ರಾಷ್ಟ್ರದ ಬಗ್ಗೆ ಡಿ.ಕೆ.ಸುರೇಶ್ ಹೇಳಿಕೆ ವಿಚಾರ ಕುರಿತು ಸುದ್ದಿಗಾರೊಂದಿಗೆ ಪ್ರತಿಕ್ರಿಯಿಸಿದ ಅವರು, ನಿನ್ನೆ ಡಿ.ಕೆ.ಸುರೇಶ್ ದೇಶ ವಿಭಜನೆ ಬಗ್ಗೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಆರ್ಥಿಕ ತಾರತಮ್ಯ, ಕರ್ನಾಟಕಕ್ಕೆ ಅನ್ಯಾಯ ಎಂಬ ಕಾರಣ ಕೊಟ್ಟಿದ್ದಾರೆ.
ಕರ್ನಾಟಕದಲ್ಲಿ ಬಿರಿಯಾನಿ ಊಟ ಮಾಡಿ ಭಾರತ್ ಜೋಡೊ ನ್ಯಾಯ ಯಾತ್ರೆ ಮಾಡಿದರು. ಈಗ ವಿಭಜನೆ ಬಗ್ಗೆ ಮಾತನಾಡುತ್ತಿದ್ದಾರೆ. ಒಂದು ವೇಳೆ ವಿಭಜನೆ ಆಯ್ತು ಅಂತ ತಿಳಿದುಕೊಳ್ಳಿ. ತಮಿಳುನಾಡಿನಿಂದ ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಸಾಧ್ಯವೇ ಎಂದು ಟಾಂಗ್ ಕೊಟ್ಟಿದ್ದಾರೆ.
ಬಡ ಜನರ ಲೂಟಿ ಮಾಡಿಕೊಂಡು ಸಾಕ್ಷಿಗುಡ್ಡೆ ಮಾಡಿದ್ದಾರೆ. ಅಂಥವರನ್ನ ತೆಗೆದುಕೊಂಡು ಹೋಗಿ ದೇಶ ಕಟ್ಟು ಅಂತ ಕಳುಹಿಸಿದ್ರೆ ಕಟ್ತಾರಾ? ಅವರ ಸಾಮ್ರಾಜ್ಯ ಕಟ್ಟುಕೊಳ್ತಾರೆ ಅಷ್ಟೇ. ಇವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಡಿ.ಕೆ ಸುರೇಶ್ ವಿರುದ್ಧ ಲೇವಡಿ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಮುಂದೆ ವಾಸ್ತವವನ್ನ ಅವರಿಗೆ ಮನವರಿಕೆ ಮಾಡಬೇಕು. ಅವರ ಮನವೊಲಿಸಿ ಹಣ ಪಡೆಯಬೇಕು. ಅದನ್ನ ಬಿಟ್ಟು ಇವರ ಬಾಲಿಷ ಹೇಳಿಕೆಗಳಿಂದ ಸಮಸ್ಯೆ ಬಗೆಹರಿಯಲ್ಲ ಎಂದು ತಿಳಿಸಿದ್ದಾರೆ.